ಮುಲ್ಕಿ: ಪೌರಕಾರ್ಮಿಕರು ನಗರದ ರಾಯಭಾರಿಗಳಾಗಿದ್ದು, ನಗರದ ಸ್ವಚ್ಛತೆಗೆ ಆರೋಗ್ಯ ಒತ್ತೆಯಿಟ್ಟು, ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಕೊರೊನಾ ದಿನಗಳಲ್ಲಿಯೂ ಹೆದರದೆ, ನಗರದಲ್ಲಿ ಸ್ವಚ್ಛತೆ ಕಾಪಾಡುತ್ತಿರುವ ಮುಲ್ಕಿ ನಗರ ಪಂ. ಪೌರ ಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಮುಲ್ಕಿ ನಪಂ ನಿವೃತ್ತ ಮುಖ್ಯಾಧಿಕಾರಿ ಡಾ. ಹರಿಶ್ಚಂದ್ರ ಸಾಲಿಯಾನ್ ಹೇಳಿದರು.
ಮುಲ್ಕಿ ನಪಂ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ಮುಲ್ಕಿ ನಪಂನಲ್ಲಿ ಸುಮಾರು 22ಕ್ಕೂ ಹೆಚ್ಚು ಪೌರಕಾರ್ಮಿಕರು ನೇರ ನೇಮಕ ನಿರೀಕ್ಷೆಯಲ್ಲಿದ್ದು, ಸರಕಾರದ ಗಮನಕ್ಕೆ ತರಲಾಗಿದೆ. ನಪಂ ವ್ಯಾಪ್ತಿಯ ಪೌರಕಾರ್ಮಿಕರ ಸುರಕ್ಷತೆಗೆ ಸರಕಾರದ ನಿರ್ದೇಶನದಂತೆ ನಪಂ ಬದ್ಧ ಎಂದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಮುಲ್ಕಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ನೀಡುವ ಮಹತ್ವ ಶ್ಲಾಘನೀಯ, ನೆರೆ ಸಂದರ್ಭವೂ ನಿಷ್ಠೆಯಿಂದ ದುಡಿದು ಮಾದರಿಯಾಗಿದ್ದಾರೆ. ಅರೆಕಾಲಿಕ ಪೌರಕಾರ್ಮಿಕರನ್ನು ನೇರ ನೇಮಕಾತಿಗೆ ಮುಲ್ಕಿ ನಪಂ ಮೂಲಕ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ರಾಧಿಕಾ ಯಾದವ ಕೋಟ್ಯಾನ್, ಸತೀಶ್ ಅಂಚನ್, ದಯಾವತಿ ಅಂಚನ್, ಬಾಲಚಂದ್ರ ಕಾಮತ್, ಮುಲ್ಕಿ ನ.ಪಂ.ಆರೋಗ್ಯಾಧಿಕಾರಿ ಲಿಲ್ಲಿ ನಾಯರ್, ಕಂದಾಯ ಅಧಿಕಾರಿ ಅಶೋಕ್, ಸಿಬ್ಬಂದಿ ಪ್ರಕಾಶ್, ಪೌರಕಾರ್ಮಿಕರ ಮೇಲ್ವಿಚಾರಕ ನವೀನ್ ಚಂದ್ರ, ಸುಂದರ, ನ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
ಪೌರಕಾರ್ಮಿಕರ ಪರವಾಗಿ ಕಂದಾಯ ಅಧಿಕಾರಿ ಅಶೋಕ್ ಮಾತನಾಡಿ, ನಪಂ ವ್ಯಾಪ್ತಿಯಲ್ಲಿ ಕಸ, ತ್ಯಾಜ್ಯ ವಿಲೇವಾರಿ ಮಾಡುವಾಗ ಕೆಲ ನಾಗರಿಕರು ಪೌರ ಕಾರ್ಮಿಕರ ಬಗ್ಗೆ ಕೀಳಾಗಿ ವರ್ತಿಸುತ್ತಿ ರುವ ಬಗ್ಗೆ ದೂರು ಬಂದಿದ್ದು, ಅಂತವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಉತ್ತಮ ಸೇವೆಗೈದ ಪೌರ ಕಾರ್ಮಿಕರಾದ ಪುರುಷೋತ್ತಮ, ಗಣೇಶ, ಸದಾನಂದ, ಸುನಿಲ್, ಮಂಜುಳಾ, ದಾಮೋದರ ಅವರನ್ನು ಗೌರವಿಸಲಾಯಿತು. ಪೌರ ಕಾರ್ಮಿಕರಿಗೆ ನಡೆದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಶೋಕ್ ನಿರೂಪಿಸಿದರು.
Kshetra Samachara
23/09/2020 10:56 am