ಉಡುಪಿ: ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಗೆ ಸಹಕಾರ ನೀಡಿ ಆತನ ಬೆಳವಣಿಗೆಗೆ ಸಹಕಾರಿಯಾದ್ರೆ ಅದು ನಿಜವಾದ ಕಲಾಧರ್ಮ. ಅಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು.
ಇಲ್ಲಿ ನೋಡಿ.. ಜಗ್ಗೇಶ್, ಯಶ್ ಧೋನಿ, ದರ್ಶನ್ , ಜಗ್ಗಿ ವಾಸುದೇವ್ ಹೀಗೆ ಸಾಲು ಸಾಲು ಖ್ಯಾತನಾಮರ ಕಲಾಕೃತಿಗಳು ಮತ್ತು ಒಂದಷ್ಟು ಗೊಂಬೆಗಳ ಪ್ರದರ್ಶನ. ಅಬ್ಬಾ ಇದರಲ್ಲೇನು ವಿಶೇಷ ಅಂತೀರಾ? ಆದರೆ, ಇವನ್ನು ರಚಿಸಿದವರನ್ನು ಕಂಡಾಗ ಎಂತಹವರಿಗೂ ಆ ಕಲಾಕೃತಿಗಳ ಮೌಲ್ಯ ತಿಳಿದೀತು. ಆ ಕಲಾವಿದರು ಎಲ್ಲರಂತಲ್ಲ.. ಅವರಿಗೆ ವಿಚಿತ್ರ ಆರೋಗ್ಯ ಸಮಸ್ಯೆ ಇದೆ. ಅವರ ದೇಹ ಒಟ್ಟಾರೆ ಆಚೀಚೆ ಅಲ್ಲಾಡಿದ್ರೆ ಮೂಳೆ ಮುರಿಯುತ್ತದೆ! ಅಂತಹ ಸಮಸ್ಯೆ ಇರುವ ಗಣೇಶ್ ಮತ್ತು ಸುಮಂಗಲಾ ರಚಿಸಿರುವ ಕಲಾಕೃತಿ ಇವು.
ಸಂಧ್ಯೋದಯ ಪಿತ್ರೋಡಿ ಸ್ಫೂರ್ತಿ -2020 ಎಂಬ ಕಾರ್ಯಕ್ರಮ ಸಂಘಟಿಸಿ ಇವರ ಕಲಾಕೃತಿ ಪ್ರದರ್ಶಿಸಿ ಅದರಿಂದ ಸಂಗ್ರಹವಾದ ಮೊತ್ತವನ್ನು ಆ ಕಲಾವಿದರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾಕೃತಿ ಖರೀದಿಸಿದ ಎಲ್ಲರ ಮುಖದಲ್ಲೂ ಧನ್ಯತಾ ಭಾವವಿತ್ತು. ಈ ಕಲಾ ಪ್ರದರ್ಶನದಲ್ಲಿ 25 ಭಾವಚಿತ್ರಗಳು, 15 ಗೊಂಬೆಗಳು, 19 ಆಭರಣಗಳು ಮಾರಾಟಗೊಂಡವು.
ಈ ಕಲಾಪ್ರದರ್ಶನವನ್ನು ಮುಖ್ಯ ಅತಿಥಿಗಳಾದ ಇಂದ್ರಾಳಿ ಜಯಕರ್ ಶೆಟ್ಟಿಯವರು ಅವರದೇ ಭಾವಚಿತ್ರ ಅನಾವರಣಗೊಳಿಸಿ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ನೃತ್ಯಗುರು ರಾಮಕೃಷ್ಣ ಕೊಡಂಚ, ನವೀನ್ ಸಾಲ್ಯಾನ್ ಡೈಸಿ ಟೀಚರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಯಕರ್ ಶೆಟ್ಟಿ, ವಿಶೇಷ ಚೇತನರಿಗೆ ಅನುಕಂಪದ ಬದಲು ಅವಕಾಶ ನೀಡಿ ಅವರನ್ನು ಬೆಳೆಸಬೇಕು ಎಂದರು. ವಿಶ್ವದಾಖಲೆ ಖ್ಯಾತಿಯ ಯೋಗಬಾಲೆ ತನುಶ್ರೀ ಹೆತ್ತವರು ಸ್ಫೂರ್ತಿ- 2020 ಎಂಬ ಈ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದರು.
Kshetra Samachara
07/12/2020 07:38 pm