ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಆಧುನಿಕ ಶಿಕ್ಷಣದಲ್ಲಿ ನಮ್ಮ ಸಂಸ್ಕೃತಿಯ ಕಡೆಗಣನೆ : ರೋಹಿತ್ ಚಕ್ರತೀರ್ಥ

ಕಾಪು: ಇಲ್ಲಿಗೆ ಸಮೀಪದ ಕುಂಜಾರುಗಿರಿ ದೇವಸ್ಥಾನದಲ್ಲಿ ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಚಾತುರ್ಮಾಸ್ಯ ಸಂಕಲ್ಪದ ಸಮಾರೋಪ ಸಮಾರಂಭವು ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ವೇಳೆ ಅಂಕಣಕಾರ ರೋಹಿತ್ ಚಕ್ರತೀರ್ಥ, ಪಠ್ಯಪುಸ್ತಕಗಳಲ್ಲಿ ಭಾರತೀಯತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಆಧುನಿಕ ತಂತ್ರಜ್ಞಾನದೊಂದಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ, ಬುದ್ಧಿವಂತಿಕೆಯೊಂದಿಗೆ ಬದುಕುವ ಕಲೆ ಈಗಿನ ಶಿಕ್ಷಣದಲ್ಲಿ ಇಲ್ಲ. ಭಾರತೀಯ ಪರಂಪರೆಯ ಶಿಕ್ಷಣದೊಂದಿಗೆ ಪರದೇಶಗಳ ಚಿಂತನೆಯನ್ನು ಸೇರಿಸಿ ಸಮನ್ವಯ ಶಿಕ್ಷಣವನ್ನು ನೀಡಿದರೆ ಮಾತ್ರ ವಿದ್ಯಾರ್ಥಿಗಳು ನಿಜ ಜೀವನದಲ್ಲೂ ಸಾಧನೆ ಮಾಡಬಹುದು. ಇಂಗ್ಲಿಷ್ ಗೊತ್ತಿರುವುದರಿಂದ ನಮಗೆ ನ್ಯೂಟನ್ ಬೇಗ ಅರ್ಥವಾಗುತ್ತಾನೆ.ನಾವು ಗಣಿತ ಸಾರ ಸಂಗ್ರಹವನ್ನು ನೋಡುವುದಿಲ್ಲ.ಲೀಲಾವತಿಯನ್ನು ನೋಡುವುದಿಲ್ಲ.ಅದೆಲ್ಲವೂ ಸಣ್ಣ ಸಣ್ಣ ಬಾಕ್ಸ್ ಗಳಲ್ಲಷ್ಟೇ ಸುದ್ದಿಯಾಗುತ್ತದೆ. ಬೋದಾಯನ ಹೇಳಿದ್ದನ್ನು ಪೈಥಾಗೊರಸ್ 300 ವರ್ಷಗಳ ನಂತರ ಹೇಳಿದ್ದಾನೆ. ಆದರೆ ಪೈಥಾಗೊರಸ್ ಗೆ ಪ್ರಾಮುಖ್ಯತೆ ಸಿಗುತ್ತದೆ. ನಮಗೆ ಸಂಸ್ಕೃತ ಭಾಷೆ ಮತ್ತು ಭಾರತೀಯ ಪರಂಪರೆಯ ಬಗ್ಗೆ ಗೊತ್ತಿಲ್ಲದೇ ಇರುವುದರಿಂದ ದೇಶದ ಬಗ್ಗೆಯೂ ಗೊತ್ತಿರುವುದಿಲ್ಲ ಎಂದು ಹೇಳಿದರು.

ಬಳಿಕ ಗ್ರಾಮದ ಭಕ್ತರ ಪರವಾಗಿ ಶ್ರೀಪಾದರಿಗೆ ಹಿರಿಯರಾದ ಗೋವಿಂದ ಭಟ್ ಇವರು ಶಾಲು ಹೊದೆಸಿ ಫಲಪುಷ್ಪ ನೀಡುವ ಮೂಲಕ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಪಾದರು ಶಾಲೆ ಕಾಲೇಜುಗಳಲ್ಲಿ ಮಕ್ಕಳು ಸರಿಯಾಗಿ ಮಾಡಿದ ಪಾಠದ ಬಗ್ಗೆ ಪ್ರೆಶ್ನೆ ಕೇಳಿದರೆ ಮಾತ್ರ ಅವರಿಗೆ ಸರಿಯಾಗಿ ಪಾಠ ಅರ್ಥ ಆಗಿದೆ ಎಂದರ್ಥ. ಮಕ್ಕಳು ಅಂಕಗಳ ಕಡೆ ಹೆಚ್ಚು ಗಮನ ಕೊಟ್ಟರೂ, ಜೀವನದಲ್ಲಿ ಟೀಕೆಗಳಿಲ್ಲದೆ ಸಾಗ ಬೇಕಾದರೆ ಭಾರತೀಯ ಶಿಕ್ಷಣ ಅಗತ್ಯವಿದೆ.ಇಂತಹ ಶಿಕ್ಷಣದಿಂದ ಭಾರತವು ವಿಶ್ವಗುರು ಆಗಲು ಸಾಧ್ಯ.ಕುಂಜಾರುಗಿರಿಯ ಭಕ್ತರು ಬಹಳ ವೈಭವದಿಂದ ಕೃಷ್ಣದೇವರ ಸೇವೆ ಮಾಡಿ ಚಾತುರ್ಮಾಸ್ಯ ಪರ್ವಕಾಲದಲ್ಲಿ ನಡೆದ ಪ್ರತಿಯೊಂದು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟಿದ್ದಾರೆ.ಎಲ್ಲರಿಗೂ ಶ್ರೇಯಸ್ಸನ್ನು ಮಾಡಲಿ ಎಂದು ಅನುಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

12/09/2022 08:44 pm

Cinque Terre

4.39 K

Cinque Terre

4