ವರದಿ: ರಹೀಂ ಉಜಿರೆ
ಕುಂದಾಪುರ: ಗ್ರಾಮೀಣ ಭಾಗದಲ್ಲಿ ತಾವು ಹಿಂದೆ ಕಲಿತ ಶಾಲೆಗಳು ಈಗ ಹಲವು ಸಮಸ್ಯೆಗಳಿಂದ ಸೊರಗುತ್ತಿರುವುದನ್ನು ಕಂಡ ಯುವಜನರ ತಂಡವೊಂದು ಶಾಲೆ ಏಳಿಗೆಗೆ ಕೆಲಸ ಮಾಡಲು ಹೊರಟಿದೆ. 'ಕನ್ನಡ ಮನಸುಗಳು ಪ್ರತಿಷ್ಠಾನ' ಯುವಜನರ ಪಡೆ ಮೂರೂವರೆ ವರ್ಷಗಳಿಂದ 'ಸರ್ಕಾರಿ ಶಾಲೆ ಉಳಿಸಿ ಅಭಿಯಾನ' ಆರಂಭಿಸಿದೆ.
ನಮಗೆಲ್ಲ ತಿಳಿದಂತೆ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳಿಲ್ಲ, ಆಧುನಿಕ ಕಲಿಕೆ ಪರಿಕರಗಳಿಲ್ಲ. ಶಾಲೆಗಳು ಸುಣ್ಣಬಣ್ಣ ಕಾಣದೇ ಅವೆಷ್ಟೋ ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಯುವ ತಂಡ ಕನ್ನಡ ಶಾಲೆಗಳಿಗೆ ಹೊಸ ಕಾಯಕಲ್ಪ ನೀಡುವ ಕಾರ್ಯ ಆರಂಭಿಸಿದೆ. ರಾಜ್ಯಾದ್ಯಂತ ಈವರೆಗೆ 11 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು, ಶಾಲೆಗಳಿಗೆ ಅಗತ್ಯವಿರುವ ನೀರು, ಟಾಯ್ಲೆಟ್ ಸೇರಿ ಇತರ ಎಲ್ಲ ಮೂಲ ಸೌಕರ್ಯ ನೀಡಿ ಹಳೆ ಶಾಲಾ ಕಟ್ಟಡಕ್ಕೆ ಹೊಸ ಮೆರಗು ನೀಡಿದೆ.
ಕನ್ನಡ ಮನಸುಗಳು ಪ್ರತಿಷ್ಠಾನದಲ್ಲಿ150 ಮಂದಿ ಸದಸ್ಯರಿದ್ದಾರೆ. ಸರಕಾರಿ ಉದ್ಯೋಗಿಗಳಿಂದ ಹಿಡಿದು ಐಟಿ ಬಿಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿದ್ದಾರೆ. ನಟ- ನಟಿಯರೂ ಕೈಜೋಡಿಸಿದ್ದಾರೆ. ತಿಂಗಳಲ್ಲಿ 3 ವೀಕೆಂಡ್ ಅಭಿಯಾನಕ್ಕೆ ಸೀಮಿತ. ಕಾಸರಗೋಡು- ಮಂಜೇಶ್ವರದ ಕನ್ನಡ ಶಾಲೆಯಿಂದ ಹಿಡಿದು ಈವರೆಗೆ ರಾಜ್ಯದ 11 ಶಾಲೆಗಳಲ್ಲಿ ಈ ಯಶಸ್ವಿ ಅಭಿಯಾನ ನಡೆದಿದೆ. ಸಿನಿಮಾ ನಟಿ ನೀತು ಕೂಡ ಹಲವೆಡೆ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಬೈಂದೂರು ಕ್ಷೇತ್ರ ಶಿಕ್ಷಣ ವಲಯದ ಕರ್ಕುಂಜೆಯ ಸರ್ಕಾರಿ ಹಿ.ಪ್ರಾ. ಶಾಲೆ ಮತ್ತು ಕೂಡಿಗೆ ಸರ್ಕಾರಿ ಕಿ. ಪ್ರಾ. ಶಾಲೆಗೆ ಆಗಮಿಸಿದ 50ಕ್ಕೂ ಹೆಚ್ಚು ಮಂದಿಯ ತಂಡ ಕರ್ಕುಂಜೆ ಶಾಲೆಯಲ್ಲಿ ಅಭಿಯಾನ ನಡೆಸಿತು. ಶಾಲೆಗೆ ಆಧುನಿಕ ಕಲಿಕಾ ಪರಿಕರ, ವಾಟರ್ ಫಿಲ್ಟರ್, ಫ್ಯಾನ್ ಸಹಿತ ಅಗತ್ಯ ವಸ್ತು ನೀಡಿತು. ಮಕ್ಕಳಿಗೆ ಪುಸ್ತಕ, ಪೆನ್ನು, ಮಾಸ್ಕ್ ನೀಡಿದೆ.
ಕರ್ಕುಂಜೆ ಶಾಲೆ ಮುಖ್ಯ ದ್ವಾರದ ಕಾಂಪೌಂಡ್ ಗೋಡೆಗೆ ವರ್ಲಿ ಆರ್ಟ್, ಒಳಭಾಗದ ಗೋಡೆಗಳಿಗೆ ಸುಣ್ಣಬಣ್ಣ, ಮುಖ್ಯ ರಸ್ತೆಗೆ ಕಾಣುವ ಕೊಠಡಿ ಗೋಡೆಯಲ್ಲಿ ಪೇಂಟಿಂಗ್ ಮೂಲಕ ಯಕ್ಷಗಾನ ಕಲಾಕೃತಿ, ಪಿಲ್ಲರ್ ಗಳಿಗೆ, ಧ್ವಜಸ್ತಂಭಕ್ಕೆ ಬಣ್ಣ ಬಳಿಯಲಾಯಿತು.
ಒಟ್ಟಾರೆ ಈ ತಂಡದ ಹೊಸ ಪರಿಕಲ್ಪನೆ ಮುಂದೊಂದು ದಿನ ಸರಕಾರಿ ಶಾಲೆಯನ್ನು 'ಉಳಿಸಿ- ಬೆಳೆಸುವ' ಭರವಸೆ ಹುಟ್ಟುಹಾಕಿದೆ.
PublicNext
31/01/2022 06:50 pm