ಕಟೀಲು: ಕಟೀಲು ಇಂಗ್ಲಿಷ್ ಮೀಡಿಯಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮಕ್ಕಳಲ್ಲಿ ಹೂವುಗಳ ಬಗ್ಗೆ ಮಾಹಿತಿ ತಿಳಿಯಲು ಆಸಕ್ತಿ ಮೂಡಿಸಲು ವಿಶಿಷ್ಟ ಸ್ಪರ್ಧೆಯೊಂದು ಆಯೋಜಿಸಿದ್ದು ಮಕ್ಕಳಿಗೆ ಮನೆಯಿಂದ ಬರುವಾಗ ಮನೆಯಲ್ಲಿ ಬೆಳೆದ, ಆಸುಪಾಸಿನಲ್ಲಿ ಸಿಗುವ ನಾನಾ ಬಗೆಯ ಹೂವುಗಳನ್ನು ತಂದು ಜೋಡಿಸಲು ತಿಳಿಸಲಾಗಿತ್ತು.
ಗುಲಾಬಿ, ಬಣ್ಣಬಣ್ಣದ ದಾಸವಾಳ, ಮಲ್ಲಿಗೆ, ತಾವರೆ, ಸೇವಂತಿಗೆ, ಸದಾಪುಷ್ಪ, ಕೇಪಳ, ಹಿಂಗಾರ, ತುಳಸಿ, ಪಚ್ಚೆಕೊರಳು, ಮಂದಾರ, ಮುತ್ತುಮಲ್ಲಿಗೆ, ಗೊಂಡೆಹೂ, ಚಂಪ ಹೂ, ಸುಗಂಧರಾಜ, ನಾಚಿಕೆಮುಳ್ಳಿನ ಹೂ, ಪೇರಳೆಹೂ, ಮಾವಿನ ಹೂ, ಪಾರಿಜಾತ, ಅಬ್ಬಮಲ್ಲಿಗೆ ಹೀಗೆ 111 ಬಗೆಯ ಹೂವುಗಳನ್ನು ಮನೆಯಿಂದ ಬರುವಾಗ ತಂದು ತರಗತಿಯಲ್ಲಿ ಅಂದವಾಗಿ ಅಲಂಕರಿಸಿದ ಆರನೇ ತರಗತಿಯ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನೂ, 101 ಬಗೆಯ ಹೂವುಗಳನ್ನು ತಂದ ಮೂರನೇ ತರಗತಿಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನೂ, ತಂದ ಹೂವುಗಳನ್ನು ಚೆನ್ನಾಗಿ ಅಲಂಕಾರ ಮಾಡಿದ ಐದನೆಯ ತರಗತಿಯ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನೂ. ನಾಲ್ಕನೆಯ ತರಗತಿಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನೂ ಪಡೆದರು.
ನೂರಕ್ಕೂ ಹೆಚ್ಚು ಬಗೆಯ ಹೂವುಗಳನ್ನು ತಂದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಟೀಲು ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಬಹುಮಾನ ವಿತರಿಸಿದರು. ಮುಖ್ಯಶಿಕ್ಷಕರಾದ ವಿಜಯಲಕ್ಷ್ಮೀ, ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
PublicNext
10/01/2022 09:59 pm