ಮಂಗಳೂರು: ತಮಸೋಮ ಜ್ಯೋತಿರ್ಗಮಯ' ಅಂದರೆ ಅಂಧಕಾರದಿಂದ ಬೆಳಕಿನೆಡೆಗೆ ವಿಶಿಷ್ಟ ಹಬ್ಬವೇ ದೀಪಾವಳಿ. ಈ ಹಬ್ಬದ ಮೂಲಕ ಎಲ್ಲೆಲ್ಲೂ ಸಂತಸ, ಸಡಗರ ತುಂಬಿರುತ್ತದೆ. ರಾತ್ರಿಯಾಗುತ್ತಿದ್ದಂತೆ ಕತ್ತಲನ್ನು ಬೆಳಗು ಮಾಡಲು ಸಣ್ಣ ಸಣ್ಣ ಹಣತೆಯಲ್ಲಿ ಇರಿಸಿದ ದೀಪವು ತನ್ನ ವ್ಯಾಪ್ತಿಯನ್ನು ಬೆಳಗಿಸುತ್ತದೆ. ಈ ಮೂಲಕ ಮಾನವನೂ ತನ್ನ ಕೈಲಾದಷ್ಟು ಇನ್ನೊಬ್ಬರ ಕಷ್ಟಕ್ಕೆ ನೆರವಾಗಬೇಕು ಎಂಬ ಆದ್ಯಂತ ಸತ್ಯವನ್ನು ಸಾರುತ್ತದೆ.
ದೀಪಾವಳಿ ಹಬ್ಬವು ಇಂತಹ ಸಾವಿರಾರು ಕಲ್ಪನೆಗಳನ್ನು ಹುಟ್ಟು ಹಾಕುತ್ತದೆ. ಬೆಳಕು ಜ್ಞಾನದ ಸಂಕೇತ. ಜ್ಞಾನವು ನಮ್ಮನ್ನು ಅಂಧಕಾರವೆಂದು ಬುದ್ಧಿ ಶೂನ್ಯತೆಯಿಂದ ಚಿಂತನೆಯೆಂಬ ಸಾಕ್ಷಾತ್ಕಾರದೆಡೆಗೆ ಒಯ್ಯುತ್ತದೆ. ಮಂಗಳೂರು ಎಂಬುದು ಶಿಕ್ಷಣದ ತವರೂರು. ಇಲ್ಲಿ ದೇಶ ವಿದೇಶಗಳಿಂದ ಬಂದು ಶಿಕ್ಷಣ ಪಡೆಯುವವರಿದ್ದಾರೆ. ನಗರದ ಕರಾವಳಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಸಂಭ್ರಮ, ಸಡಗರದ ದೀಪಾವಳಿ ಆಚರಣೆಯನ್ನು ಆಯೋಜಿಸಲಾಗಿತ್ತು. ಮನೆಯಿಂದ ದೂರವಿದ್ದು, ಹಬ್ಬಕ್ಕೆ ಮನೆಗೆ ಹೋಗಲಾಗದಿರುವ ವಿದ್ಯಾರ್ಥಿಗಳಿಗಾಗಿ ಕರಾವಳಿ ಗ್ರೂಪ್ ಆಫ್ ಕಾಲೇಜಿನ ಮುಖ್ಯಸ್ಥ ಗಣೇಶ್ ರಾವ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬವನ್ನು ಆಯೋಜಿಸಿದ್ದರು.
ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಕಾಲೇಜು ಯುವತಿಯರು ನಾಚಿ ನೀರಾಗಿ ಫೋಟೋಗಳಿಗೆ ಪೋಸ್ ಕೊಡ್ತಿರೋದು ಕಂಡು ಬಂದಿತು. ಜೊತೆಗೆ ಬೆಕ್ಕಿನ ನಡಿಗೆಗೆ ಯುವತಿಯರು ಸ್ಟೆಪ್ ಹಾಕಿದರು. ಅಲ್ಲದೆ ಭರತನಾಟ್ಯದಿಂದ ಹಿಡಿದು ಬಾಲಿವುಡ್ ಹಾಡಿಗೂ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಒಟ್ಟಿನಲ್ಲಿ ದೀಪಾವಳಿ ಕರಾವಳಿ ಕಾಲೇಜಿನಲ್ಲಿ ವಿಶಿಷ್ಟ ಲೋಕವನ್ನೇ ತೆರೆದಿಟ್ಟಿದೆ.
Kshetra Samachara
03/11/2021 02:06 pm