ಮಂಗಳೂರು: ಅನುಪಮ ಮಹಿಳಾ ಮಾಸಿಕ ತನ್ನ ಇಪ್ಪತ್ತರ ಹರೆಯ ಪೂರ್ಣಗೊಳಿಸಿದೆ. 2000ನೇ ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಸ್ತ್ರೀಯರಿಂದಲೇ 'ಅನುಪಮ' ಮಾಸ ಪತ್ರಿಕೆ ಆರಂಭಗೊಂಡಿತು.
ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ಕೌಟುಂಬಿಕ ಪತ್ರಿಕೆ. 'ಅನುಪಮ' ಜಾತಿ, ಜನಾಂಗ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಧ್ವನಿ ನೀಡಿದೆ. 20ನೇ ವರ್ಷ ಪೂರ್ಣಗೊಳಿಸಿದ ಈ ಸುಸಂದರ್ಭದಲ್ಲಿ ಅನುಪಮ ಬಳಗ ವಿಶೇಷಾಂಕ ಹೊರ ತಂದಿದ್ದು, ಬಿಡುಗಡೆ ಸಮಾರಂಭ ಡಿ. 26ರಂದು ಮಧ್ಯಾಹ್ನ 2:30ಕ್ಕೆ ಮಂಗಳೂರಿನ ರಾವ್ & ರಾವ್ ವೃತ್ತದ ಬಳಿಯ 'ಸಹಕಾರಿ ಸದನ'ದ 3ನೇ ಮಹಡಿಯಲ್ಲಿರುವ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ವಿಜಯ ಟೈಮ್ಸ್ ಪ್ರಧಾನ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು ಭಾಗವಹಿಸಿ ವಿಶೇಷಾಂಕ ಬಿಡುಗಡೆಗೊಳಿಸಲಿದ್ದಾರೆ. ಕರಾವಳಿ ವಾಚಕಿ-ಲೇಖಕಿಯರ ಸಂಘದ ಕಾರ್ಯದರ್ಶಿ ಸುಖಲಾಕ್ಷಿ ಸುವರ್ಣ, ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಶಮೀನಾ ಅಫ್ಘಾನ್ ಮುಖ್ಯ ಅತಿಥಿಗಳಾಗಿದ್ದು, ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ವೇಳೆ ಸಾಧಕಿ ಆಯಿಶಾ ಮುಮ್ಮಾಜ್ ಅವರಿಗೆ ಸನ್ಮಾನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶಹನಾಝ್ ಎಂ., ಸಬೀಹಾ ಫಾತಿಮಾ, ಶಹೀದಾ, ಸಮೀನಾ ಉಪ್ಪಿನಂಗಡಿ, ಕುಲ್ಸುಮ್ ಅಬೂಬಕ್ಕರ್ ಉಪಸ್ಥಿತರಿದ್ದರು.
Kshetra Samachara
25/12/2020 04:22 pm