ಬಂಟ್ವಾಳ: ಆನ್ಲೈನ್ ಯಕ್ಷಗಾನ ಪ್ರದರ್ಶನಗಳು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ನೋಡಬಹುದು ಎಂಬ ಥೀಮ್ ಜನಪ್ರಿಯವಾದ ಮೇಲೆ ಈಗ ಹಲವು ಹೊಸ ಪ್ರಯೋಗಗಳನ್ನೂ ಯಕ್ಷಾಭಿಮಾನಿಗಳು ಮಾಡುತ್ತಿದ್ದಾರೆ.
ವೇಷ ಧರಿಸದೆ ಒಂದಿಡೀ ಯಕ್ಷಗಾನವನ್ನು ಅಭಿನಯಿಸಿ ತೋರಿಸುವ ವೇಷರಹಿತ ಯಕ್ಷಗಾನ ಪ್ರದರ್ಶನಕ್ಕೆ ತಂಡವೊಂದು ಸಜ್ಜಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಂತರ್ಜಾಲದ ಮೂಲಕ ಇಂಥ ಪ್ರದರ್ಶನ ಪ್ರಯೋಗವೊಂದು ನಡೆಯುತ್ತಿರುವುದು ಇದೇ ಪ್ರಥಮ.
ಬಂಟ್ವಾಳ ತಾಲೂಕಿನ ಮಂಚಿ ಹಾಗೂ ಬಿ.ಸಿ.ರೋಡಿನ ಉತ್ಸಾಹಿ ತರುಣರೇ ಇದರ ರೂವಾರಿಗಳು. ಯಕ್ಷನೂಜಿಪ್ಪಾಡಿ ಎಂಬ ಕಲಾತಂಡದ ಮೂಲಕ ವೇಷರಹಿತ ಯಕ್ಷಗಾನದ ಲೈವ್ ಪ್ರದರ್ಶನವನ್ನು ಅವರು ಯೂಟ್ಯೂಬ್ ಮತ್ತು ಫೇಸ್ ಬುಕ್ ಲೈವ್ ನಲ್ಲಿ ಯಕ್ಷನೂಜಿಪ್ಪಾಡಿ ಹೆಸರಲ್ಲೇ ಪ್ರದರ್ಶಿಸಲಿದ್ದಾರೆ.
ಡಿಸೆಂಬರ್ 20ರಂದು ಸಂಜೆ 5ರಿಂದ ಮೇದಿನಿ ನಿರ್ಮಾಣ ಭೂ ಉದ್ಧರಣ ಪ್ರಸಂಗ ಪ್ರದರ್ಶನ ನಡೆಯುತ್ತದೆ.
ಯಕ್ಷಗಾನವೆಂದರೆ ಬಣ್ಣಬಣ್ಣದ ವೇಷಗಳು ಕಣ್ಣಿಗೆ ಕಟ್ಟುತ್ತವೆ. ಪಾತ್ರಗಳನ್ನು ವೇಷಗಳೊಳಗೆ ನೋಡುವ ಪ್ರೇಕ್ಷಕನನ್ನು ತಾಳಮದ್ದಲೆಯಲ್ಲೂ ಹಿಡಿದಿಟ್ಟುಕೊಳ್ಳುವ ಬಗೆ ಇನ್ನೊಂದು.
ತಾಳಮದ್ದಲೆಯಲ್ಲಾದರೆ ಕುಳಿತುಕೊಂಡು ಅರ್ಧ ಹೇಳುತ್ತಾರೆ. ಇಲ್ಲಿ ಮಾತಿಗೇ ಪ್ರಾಧಾನ್ಯತೆ. ಆದರೆ ರಂಗಸ್ಥಳದಲ್ಲಿ ಹಾಗಲ್ಲ. ಪಾತ್ರಕ್ಕೊಪ್ಪುವ ವೇಷ, ಅದಕ್ಕೆ ತಕ್ಕಂತೆ ಅಭಿನಯ, ನಾಟ್ಯ ಬೇಕು.
ಸಾಮಾನ್ಯವಾಗಿ ಅಧ್ಯಯನ ಶಿಬಿರಗಳಲ್ಲಿ, ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ವೇಷ ಧರಿಸದೆ ಅಭಿನಯ ಮಾಡುವುದುಂಟು. ಆಗ ಇಜಾರು (ಪ್ಯಾಂಟು), ಬನಿಯನ್, ಗೆಜ್ಜೆ ಧರಿಸಿ ಅಭಿನಯ ಮಾಡಲಾಗುತ್ತದೆ.
ಪ್ರಸಂಗ ಅಧ್ಯಯನ ಶಿಬಿರಗಳಲ್ಲೂ ಇಂಥದ್ದನ್ನು ಮಾಡಲಾಗುತ್ತದೆ. ಆದರೆ ಇವು ಶಿಬಿರಗಳಿಗಷ್ಟೇ ಮೀಸಲಾಗಿರುತ್ತದೆ. ಅದನ್ನೇ ಪ್ರದರ್ಶನ ಮಾಡುವುದು ಈಗ ನಡೆಯುತ್ತಿರುವ ಹೊಸ ಪ್ರಯೋಗ.
Kshetra Samachara
16/12/2020 11:13 am