ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಸಾಮೂಹಿಕ ವಿವಾಹ ನಡೆಯಿತು. ಸಾಮಾನ್ಯ ಜನರ ಅನುಕೂಲಕ್ಕಾಗಿ ಸರಳ ಸಾಮೂಹಿಕ ವಿವಾಹ ಕೈಂಕರ್ಯ ನಡೆದಿದ್ದು, ನಾಲ್ಕು ಜೋಡಿ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಇಂದು ಸಪ್ತಪದಿ ತುಳಿದರು.
ದೇಗುಲದಲ್ಲಿ ಮೇ ತಿಂಗಳಿನಲ್ಲಿಯೇ ನಡೆಯಬೇಕಿದ್ದ ಸಾಮೂಹಿಕ ವಿವಾಹವನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಇಂದಿನ ವಿವಾಹದಲ್ಲಿ ವರನಿಗೆ ಐದು ಸಾವಿರ ರೂ. ಹಾಗೂ ವಧುವಿಗೆ ಹತ್ತು ಸಾವಿರ ರೂ. ನೀಡಲಾಗಿದೆ. ಅಲ್ಲದೆ, ವಧುವಿಗೆ 55 ಸಾವಿರ ರೂ. ಮೌಲ್ಯದ ಅಂದಾಜು 8 ಗ್ರಾಂ ತೂಕದ ಚಿನ್ನಾಭರಣ ನೀಡಲಾಯಿತು.
ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ 10 ಸಾವಿರ ರೂ.ನ ನಿಶ್ಚಿತ ಠೇವಣಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಪರಿಶಿಷ್ಟ ಜಾತಿಯ ವಧು- ವರರಿಗೆ ಸಮಾಜ ಕಲ್ಯಾಣ ಇಲಾಖೆಯ ಸರಳ ವಿವಾಹ ಯೋಜನೆಯಡಿ ಹಣಕಾಸು ವ್ಯವಸ್ಥೆ ಒದಗಿಸಲಾಗುತ್ತದೆ.
ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು- ವರರ ಸಂಬಂಧಿಕರಿಗೆ ದೇಗುಲದ ವತಿಯಿಂದ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪುತ್ತೂರು ತಾಲೂಕು ಉಪ ಆಯುಕ್ತ ಯತೀಶ್ ಉಳ್ಳಾಲ್,ದೇಗುಲದ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್. ನೇತೃತ್ವ ವಹಿಸಿದ್ದರು.
Kshetra Samachara
10/12/2020 08:19 pm