ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದೃಶ್ಯಗಳು, ಆರೋಗ್ಯ ರಕ್ಷಣೆಗೆ ಸುಲಭವಾಗಿ ಮತ್ತು ಸರಳವಾಗಿ ಮಾಡಬೇಕಾದ ಸಿದ್ಧ ಸೂತ್ರಗಳು. ಇವೆಲ್ಲವೂ ಪರಂಪರೆಯ ವರ್ಲಿ ಚಿತ್ತಾರದ ಮೂಲಕ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿರುವ ಆರೋಗ್ಯ ಉಪಕೇಂದ್ರದಲ್ಲಿ ಕಂಡುಬಂತು.
ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಹೈಸ್ಕೂಲಿನ ಸುಮಾರು 25ರಷ್ಟು ಹುಡುಗ, ಹುಡುಗಿಯರು ಪೈಂಟ್ ಬ್ರಷ್ ಹಿಡಿದುಕೊಂಡು ಅಪ್ಪಟ ಚಿತ್ರಕಾರರಾದರು. ಗೋಡೆಗಳೇ ಅವರ ಕ್ವಾನ್ವಾಸ್ ಗಳಾದವು. ಚಿತ್ರಕಲಾ ಶಿಕ್ಷಕ, ವರ್ಲಿ ಚಿತ್ರಕಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪರಿಚಯಿಸಿದ ಪ್ರಮುಖರಲ್ಲಿ ಒಬ್ಬರಾದ ತಾರಾನಾಥ ಕೈರಂಗಳ ಮಾರ್ಗದರ್ಶನದಲ್ಲಿ ಸಾಮಾನ್ಯವಾದ ಆರೋಗ್ಯ ಕೇಂದ್ರದ ಕಂಪೌಂಡ್ ಗೋಡೆಯಲ್ಲಿ ೧೭ ವೈವಿಧ್ಯಮಯ ಚಿತ್ರಗಳು ಮೂಡಿಬಂದವು. ಮಂಚಿ ಕೊಳ್ನಾಡು ಸರ್ಕಾರಿ ಹೈಸ್ಕೂಲಿನ ಮಕ್ಕಳಿಗೆ ಜಿಲ್ಲೆಯ ಹಲವೆಡೆ ಇಂಥ ವರ್ಲಿ ಚಿತ್ರಗಳನ್ನು ಬಿಡಿಸಿ ಅನುಭವವಿದೆ. ಈಗ ಮೊದಲ ಪಿಯುಸಿಯಲ್ಲಿ ಕಲಿಯುತ್ತಿರುವ ಪ್ರಜ್ಞಾ ಮತ್ತು ಹತ್ತನೇ ತರಗತಿಯ ಶೀತಲ್ ಮತ್ತು ಸಮೀಶ್ ಶೆಟ್ಟಿ ಈ ಕುರಿತು ಮಾತನಾಡಿ, ವರ್ಲಿ ಆರ್ಟ್ ನಮಗೆ ಖುಷಿ ಕೊಡುತ್ತದೆ. ಮನೆಯಲ್ಲಿ ಕುಳಿತುಕೊಂಡು ಪಾಠ ಕಲಿಯುತ್ತಿರುವ ಈ ಹೊತ್ತಿನಲ್ಲಿ ಹೊರಾಂಗಣ ಚಟುವಟಿಕೆಗಳು ಮುದ ನೀಡಿತು ಎಂದರು.
ಸಜೀಪಮುನ್ನೂರು ಆರೋಗ್ಯ ಉಪಕೇಂದ್ರದಲ್ಲಿ ಮಂಚಿ ಕೊಳ್ನಾಡು ಹೈಸ್ಕೂಲಿನ ಸುಮಾರು 25ರಷ್ಟು ವಿದ್ಯಾರ್ಥಿಗಳು ನಂದಾವರ ಹೈಸ್ಕೂಲಿನ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ್ ಸಲಹೆಯಂತೆ ವರ್ಲಿ ಚಿತ್ರದ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ನೇತೃತ್ವದಲ್ಲಿ ಬೆಳಗ್ಗೆ ಚಿತ್ರರಚಿಸಲು ಆರಂಭಿಸಿದವರು ಮಧ್ಯಾಹ್ನದವರೆಗೂ ಬಿಸಿಲನ್ನು ಲೆಕ್ಕಿಸದೆ ಬಣ್ಣದೊಂದಿಗೆ ಸಂಭ್ರಮಿಸಿದರು. ದಿನವಿಡೀ ನಡೆದ ಕಾರ್ಯಾಗಾರಕ್ಕೆ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ಡಾ. ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಪ್ರಮುಖರಾದ ಜಯಶಂಕರ್, ಉದಯ ಕುಮಾರ್, ಗಿರೀಶ್, ನಂದಾವರ ಹೈಸ್ಕೂಲಿನ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ್, ಮಂಚಿ ಕೊಳ್ನಾಡು ಹೈಸ್ಕೂಲಿನ ಸಹಶಿಕ್ಷಕರಾದ ಶ್ರೀರಾಮಮೂರ್ತಿ, ಸಜಿಪಮುನ್ನೂರು ಆರೋಗ್ಯ ಉಪಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಸುಮನಾ ಕುಮಾರಿ ಕ್ರಾಸ್ತಾ ಉಪಸ್ಥಿತರಿದ್ದರು.
Kshetra Samachara
08/12/2020 08:26 pm