ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕ ಮಾನವತೆಯ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಂಡಿತ್ತು. ಮುಖ್ಯವಾಗಿ ದ್ವೇಷ ಹಿಂಸೆ ಸಾಮಾನ್ಯವಾಗಿರುವ ಇಂದಿನ ವಾತಾವರಣದಲ್ಲಿ ಪ್ರೀತಿ ವಿಶ್ವಾಸ ಮತ್ತು ಮಾನವೀಯತೆಯ ಸಂದೇಶವನ್ನು ಎತ್ತಿಹಿಡಿಯುವ ದೃಷ್ಟಿಯಿಂದ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಾಡಿನ ವಿವಿಧ ಧರ್ಮೀಯ ಸ್ವಾಮೀಜಿಗಳ, ಚಿಂತಕರ ವಿಡಿಯೋ ಸಂದೇಶಗಳನ್ನು ಪ್ರಸಾರ ಮಾಡಲಾಗಿತ್ತು. ವಿಚಾರ ವಿನಿಮಯ ಕಾರ್ಯಕ್ರಮಗಳು ,ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಪರಸ್ಪರರನ್ನು ಅರಿಯುವ ಹೃದಯಗಳನ್ನು ಬೆಸೆಯುವ ದೃಷ್ಟಿಯಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ವಕೀಲರು, ಪತ್ರಕರ್ತರು ಮತ್ತು ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಪ್ರವಾದಿ ಮುಹಮ್ಮದ್ ಜೀವನ ಮತ್ತು ಸಂದೇಶ ಕುರಿತ ಈ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲ ಬಹುಮಾನ 15 ಸಾವಿರ ರೂ ನಗದು ಬಹುಮಾನ, ದ್ವಿತೀಯ ಬಹುಮಾನ 10 ಸಾವಿರ ನಗದು ಮತ್ತು ತೃತೀಯ ಬಹುಮಾನ 5 ಸಾವಿರ ನಗದು ಇರಲಿದೆ. ಪ್ರಬಂಧವನ್ನು ಈ ತಿಂಗಳ 10 ತಾರೀಕಿನ ಒಳಗಾಗಿ ತಲುಪಿಸುವಂತೆ ಜಮಾತೆ ಇಸ್ಲಾಮಿ ಹಿಂದ್ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
Kshetra Samachara
02/12/2020 06:48 pm