ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾಸಂಸ್ಥೆ ವತಿಯಿಂದ ವಿದ್ಯಾಭಾರತಿ ಕರ್ನಾಟಕ ಸಹಯೋಗದೊಂದಿಗೆ ಶಿಕ್ಷಕರ ಪ್ರಶಿಕ್ಷಣ ವರ್ಗ ನಡೆಯಿತು.
ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಉದ್ಘಾಟಿಸಿ ಮಾತನಾಡಿ, ಧ್ಯಾನ, ವೈದಿಕ ಕಾರ್ಯಗಳಲ್ಲಿ ಭಾರತಕ್ಕೆ ಪ್ರತಿಸ್ಪರ್ಧಿ ಯಾರೂ ಇಲ್ಲ. ಶ್ರೇಷ್ಠ ಸಂಸ್ಕಾರ ಹೊಂದಿದ ನಮ್ಮ ಪರಂಪರೆಯ ಸಂಸ್ಕೃತಿ ತಳಪಾಯ ನಮ್ಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ವಿದ್ಯಾಭಾರತೀಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಮಾತನಾಡಿ, ಭಾರತೀಯ ಸಂಸ್ಕೃತಿ ವಿಶ್ವಮಾನ್ಯ. ಅದರ ಉನ್ನತಿ ನಮ್ಮ ಕೈಯಲ್ಲಿದೆ. ಭಾರತದ ಪರಂಪರೆಯನ್ನು ನಮ್ಮ ಪೂರ್ವಿಕರು ಅವರ ಅಚಾರ- ವಿಚಾರ ಜೀವನಶೈಲಿ, ಜ್ಞಾನ-ಧ್ಯಾನ ಮೂಲಕ ಶ್ರೀಮಂತಗೊಳಿಸಿದ್ದಾರೆ. ಅದು ಉಳಿಯ ಬೇಕಾದರೆ ನಮ್ಮ ಮನೆಯ ಮಕ್ಕಳಿಗೆ ಆ ಅರಿವನ್ನು ಮೂಡಿಸುವುದು ವಿದ್ಯಾಭಾರತಿಯಂತಹ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ವಿದ್ಯಾರ್ಥಿಗಳಿಗೆ ಜೀವನಾಧಾರವಾಗಿರದೆ, ರಾಷ್ಟ್ರ ಭಕ್ತಿ,ಸೇವಾ ಮನೋಭಾವ ಮೈಗೂಡಿಸುವಂತಿರಬೇಕು ಎಂದರು. ಅಧ್ಯಕ್ಷತೆಯನ್ನು ಶಕ್ತಿ ಸಂಸ್ಥೆಯ ಅಡಳಿತ ನಿರ್ದೇಶಕ ಡಾ ಕೆ.ಸಿ ನಾಯ್ಕ್ ವಹಿಸಿದ್ದರು. ಶಕ್ತಿ ಪ.ಪೂ. ಕಾಲೇಜಿನ ಪ್ರಿನ್ಸಿಪಾಲ್ ಸುಧೀರ್ ಎಂ.ಎಸ್., ಶಕ್ತಿ ವಸತಿ ಶಾಲೆ ಪ್ರಿನ್ಸಿಪಾಲ್ ವಿದ್ಯಾ ಜಿ. ಕಾಮತ್, ಗೋಪಾಲಕೃಷ್ಣ ಫ್ರೀ ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ, ಶಕ್ತಿ ಸಂಸ್ಥೆ ಪ್ರಧಾನ ಸಲಹೆಗಾರ ರಮೇಶ್ ಕೆ. ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
19/11/2020 11:03 am