ಮುಲ್ಕಿ: ವಿಜಯದಶಮಿಯ ಪುಣ್ಯದಿನವಾದ ಇಂದು ನೂತನ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಉದ್ಘಾಟನೆ ಸಾಂಕೇತಿಕವಾಗಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ನಾಗವೃಜ ಕ್ಷೇತ್ರ ದಲ್ಲಿ ನಡೆಯಿತು.
ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ದೀಪ ಪ್ರಜ್ವಲನೆ ಮೂಲಕ ನೂತನ ಯಕ್ಷಗಾನ ಮಂಡಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿ, ವಿಜಯದಶಮಿಯ ಶುಭ ದಿನದಲ್ಲಿ ವಿಶ್ವಕ್ಕೆ ಶಾಂತಿ ನೆಮ್ಮದಿ ಜ್ಞಾನ ಶಕ್ತಿ ನೀಡಲು ಯಕ್ಷಗಾನ ಪ್ರೇರಣೆಯಾಗಲಿ ಹಾಗೂ ಲೋಕಕ್ಕೆ ಒಳ್ಳೆಯ ವಿಚಾರಗಳು ತಿಳಿಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪಟ್ಲ ಸತೀಶ್ ಶೆಟ್ಟಿ ಅವರ ತಂದೆ ಪಟ್ಲ ಮಹಾಬಲ ಶೆಟ್ಟಿ, ಪೋಷಕರಾದ ಶಶಿಧರ್ ಶೆಟ್ಟಿ ಬರೋಡ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ದುರ್ಗಾಪ್ರಸಾದ್ ಪಡುಬಿದ್ರಿ, ಡಾ.ಮನು ರಾವ್, ಸುದೇಶ್ ಕುಮಾರ್ ರೈ, ಸುಧಾಕರ ಆಚಾರ್ಯ, ಪುರುಷೋತ್ತಮ ಭಂಡಾರಿ, ನಿತೇಶ್ ಶೆಟ್ಟಿ ಎಕ್ಕಾರು, ಯಕ್ಷರಂಗದ ಗಣೇಶ್ ಕೊಲಕಾಡಿ, ದಾಮೋದರ ಕಟೀಲ್, ವಿನೋದ್ ಸಾಲ್ಯಾನ್ ಬೆಳ್ಳಾಯರು ಉಪಸ್ಥಿತರಿದ್ದರು.
ಮೇಳದ ಸಂಚಾಲಕ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಇಂದು ಸಾಂಕೇತಿಕವಾಗಿ ಮೇಳ ಉದ್ಘಾಟನೆಗೊಂಡಿದ್ದು, ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಹಾಗೂ ಗುರುಹಿರಿಯರ ಆಶೀರ್ವಾದದೊಂದಿಗೆ ಮೇಳ ಯಶಸ್ವಿಯಾಗಲು ಎಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು.
ಕೇವಲ ಒಂದು ತಿಂಗಳಲ್ಲಿ ಪಾವಂಜೆ ಶ್ರೀಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ ಚಾಲನೆ ನೀಡಲು ನಿರ್ಧರಿಸಿದ್ದು ದೇವರ ಪ್ರೇರಣೆಯಾಗಿದೆ. ಮೇಳ ನಡೆಸಲು ಅನೇಕ ದಾನಿಗಳು ಮುಂದೆ ಬಂದಿದ್ದು, ಮುಂದಿನ ನವೆಂಬರ್ 27ರಂದು ಪೂರ್ಣಪ್ರಮಾಣದಲ್ಲಿ ಯಕ್ಷಗಾನ ಮೇಳಕ್ಕೆ ಚಾಲನೆ ನೀಡಲಾಗುವುದು ಎಂದರು. ಬಳಿಕ ಮೇಳದ ಕಲಾವಿದರಿಂದ "ಶಾಂಭವಿ ವಿಜಯ" ಯಕ್ಷಗಾನ ಬಯಲಾಟ ನಡೆಯಿತು.
Kshetra Samachara
26/10/2020 05:29 pm