ಉಳ್ಳಾಲ: ಅನವಶ್ಯಕವಾಗಿ ಸ್ಕೂಟರ್ ಹಾರ್ನ್ ಹೊಡೆಯುತ್ತಿದ್ದ ಬಿಜೆಪಿ ಪುಢಾರಿಯನ್ನ ಪ್ರಶ್ನಿಸಿದ ಮಹಿಳೆ ಮತ್ತು ಕುಟುಂಬಸ್ಥರಿಗೆ ಸಿಸಿಬಿಯಿಂದ ಉಚ್ಛಾಟಿತ ಪೇದೆ ಮತ್ತು ಟೀಮ್ ಹಲ್ಲೆ ನಡೆಸಿದ ಘಟನೆ ಕೊಲ್ಯ ಕಣೀರು ತೋಟ ಎಂಬಲ್ಲಿ ನಡೆದಿದ್ದು, ಗಾಯಾಳು ಮಹಿಳೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲ್ಯ ಕಣೀರು ತೋಟ ನಿವಾಸಿ ವಿಜಯಲಕ್ಷ್ಮಿ(43) ಗಾಯಾಳು ಮಹಿಳೆ. ರವಿವಾರ ರಾತ್ರಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ ಹಾಕುತ್ತಿದ್ದ ವೇಳೆ ಮನೆಯಂಗಳದ ಹೊರಗೆ ಸ್ಕೂಟರಲ್ಲಿ ತೆರಳುತ್ತಿದ್ದ ಸ್ಥಳೀಯ ಬಿಜೆಪಿ ಪುಡಾರಿ ಶೇಖರ್ ಕಣೀರ್ ತೋಟ ಎಂಬವ ವಿನಾ ಕಾರಣ ಉದ್ದೇಶ ಪೂರ್ವಕವಾಗಿ ಕರ್ಕಷವಾಗಿ ಪದೇ ಪದೇ ಹಾರ್ನ್ ಹೊಡೆದಿದ್ದಾನೆ ಎನ್ನಲಾಗಿದೆ.
ಹಾರ್ನ್ ಯಾಕ್ ಹೊಡೀತೀಯ ಎಂದು ವಿಜಯಲಕ್ಷ್ಮಿ ಅವರು ಶೇಖರನಲ್ಲಿ ಪ್ರಶ್ನಿಸಿದ್ದಾರೆ.ಈ ವೇಳೆ ಶೇಖರ್ ಮತ್ತು ಆತನ ಆಪ್ತನಾದ ಸ್ಥಳೀಯ ನಿವಾಸಿ ಪಾಂಡೇಶ್ವರ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ನೂತನ್ ಕೊಲ್ಯ ಮತ್ತು ಇತರ ಸಹವರ್ತಿಗಳು ವಿಜಯಲಕ್ಷ್ಮಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಕೈ ಎಳೆದು ಭುಜಕ್ಕೆ ಕಚ್ಚಿ ಗಾಯಗೊಳಿಸಿದ್ದಾರೆ.ಈ ವೇಳೆ ವಿಜಯಲಕ್ಷ್ಮಿ ಅವರ ಪತಿ ತೇಜ್ ಪಾಲ್,ಮಕ್ಕಳಾದ ಹಿತೇಶ್,ಮತ್ತು ಹರ್ಷ ಅವರು ಗಲಾಟೆಯನ್ನ ತಡೆಯಲು ಬಂದಿದ್ದಾರೆ.
ಶೇಖರನು ವಿಜಯಲಕ್ಷ್ಮಿ ಅವರಿಗೆ ಕಲ್ಲಿಂದ ಹಲ್ಲೆ ನಡೆಸಿದ್ದು,ತಡೆಯಲು ಬಂದ ತೇಜ್ ಪಾಲ್,ಹಿತೇಶ್,ಹರ್ಷ ಅವರಿಗೂ ಗಾಯಗಳಾಗಿವೆ.
ಘಟನೆಯಿಂದ ಗಾಯಗೊಂಡಿರುವ ವಿಜಯಲಕ್ಷ್ಮಿ ಅವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು,ಪತಿ,ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಮಹಿಳೆಗೆ ಹಲ್ಲೆ ನಡೆಸಿದ ಪ್ರಮುಖ ಆರೋಪಿ ನೂತನ್ ಕೊಲ್ಯ ಈ ಹಿಂದೆ ಮಂಗಳೂರು ಸಿಸಿಬಿ ಘಟಕದಲ್ಲಿದ್ದು ಕರ್ತವ್ಯದಲ್ಲಿರುವಾಗಲೇ ಬಾರಲ್ಲಿ ಕಂಠಪೂರ್ತಿ ಕುಡಿಯುತ್ತಿದ್ದ ವೇಳೆ ಮಾಧ್ಯಮದ ಕ್ಯಾಮೆರಕ್ಕೆ ಸಿಕ್ಕಿಬಿದ್ದು ಶಿಕ್ಷಾರ್ಹ ಕ್ರಮದಡಿ ವಾಪಸ್ ಪಾಂಡೇಶ್ವರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ. ಬಿಜೆಪಿ ಪುಡಾರಿ ಶೇಖರ್,ಪೊಲೀಸ್ ಪೇದೆ ನೂತನ್ ಸೇರಿದಂತೆ ಐವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/10/2022 11:14 pm