ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ಕೋಲಾರದಿಂದ ಉಡುಪಿಗೆ ಬಂದು ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ಸಮಾಜಸೇವಕರು ರಕ್ಷಿಸಿ ಕುಟುಂಬದ ಸುಪರ್ದಿಗೆ ಒಪ್ಪಿಸಿದ ಪ್ರಸಂಗ ನಡೆದಿದೆ. ಅಣ್ಣಪ್ಪಯ್ಯ (76) ಆತ್ಮಹತ್ಯೆಗೆ ಮುಂದಾದ ವ್ಯಕ್ತಿ. ಇವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿ ಸಹಾಯದಿಂದ ಕುಟುಂಬದ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಣ್ಣಪ್ಪಯ್ಯ ಅವರು ಕರಾವಳಿ ಬೈಪಾಸ್ ಬಳಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿರುವುದು ಸಮಾಜ ಸೇವಕ ವಿಶು ಶೆಟ್ಟಿ ಅವರ ಗಮನಕ್ಕೆ ಬಂದಿದೆ. ಅವರನ್ನು ವಿಚಾರಿಸಿದಾಗ ಅಸ್ಪಷ್ಟ ಉತ್ತರ ದೊರೆಯಿತು. ಅನುಮಾನಗೊಂಡ ಅವರು ಕೂಡಲೇ ಉಡುಪಿಯ ಹಿರಿಯ ನಾಗರಿಕ ಸಹಾಯವಾಣಿಯ ಗಮನಕ್ಕೆ ತಂದರು. ಸಹಾಯವಾಣಿಯ ಸಿಬ್ಬಂದಿಗಳು ಕೂಡಲೇ ಸ್ಪಂದಿಸಿ, ವ್ಯಕ್ತಿಯನ್ನು ವಿಶು ಶೆಟ್ಟಿ ಅವರ ವಾಹನದಲ್ಲಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಆಶ್ರಮದ ಆರೈಕೆಯಿಂದ ಸಾಂತ್ವನಗೊಂಡ ಅಣ್ಣಪ್ಪಯ್ಯ ಅವರು ತಾವು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ನಡೆಸಲು ಮುಂದಾಗಿರುವ ವಿಷಯವನ್ನು ತಿಳಿಸಿದ್ದಾರೆ. ಕೊನೆಗೆ ಅವರಿಂದ ಮಗನ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡು ಮಾಹಿತಿ ನೀಡಿದಾಗ ತನ್ನ ತಂದೆ ಕಾಶಿಯಾತ್ರೆಗೆ ಹೋಗಿದ್ದಾರೆ ಎಂಬ ಉತ್ತರ ಸಿಕ್ಕಿತು.
ವಿಷಯದ ಗಂಭೀರತೆಯನ್ನು ಅರಿತ ಮಗ ಉಡುಪಿಗೆ ಬಂದಾಗ ಸಹಾಯವಾಣಿ ಸಿಬ್ಬಂದಿಗಳು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಮನವರಿಕೆ ಮಾಡಿ ಅಣ್ಣಪ್ಪಯ್ಯ ಅವರನ್ನು ಒಪ್ಪಿಸಿದರು.
PublicNext
21/09/2022 12:35 pm