ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ಲಾರಿಯ ಚಕ್ರಗಳನ್ನು ಕಳವು ಮಾಡಿರುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಲಾರಿ ಚಾಲಕ ಪುರುಷೋತ್ತಮ ತಾಂಡೇಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ಸೆ.14 ರಂದು ತಮ್ಮ ಮನೆಯಿಂದ ಲಾರಿಯಲ್ಲಿ ಮಗ ಸಾಹಿಲ್ ನ ಜೊತೆಯಲ್ಲಿ ಹೊರಟಿದ್ದರು. ರಾತ್ರಿ 9 ಗಂಟೆ ವೇಳೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಶಿರೂರು ಟೋಲ್ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ನಿಲ್ಲಿಸಿ ಮಗನೊಂದಿಗೆ ಲಾರಿಯಲ್ಲಿ ಮಲಗಿದ್ದರು. ಮರುದಿನ ಸೆ.15 ರಂದು ಬೆಳಿಗ್ಗೆ 4 ಗಂಟೆ ವೇಳೆ, ಎದ್ದು ಹೊರಡಲು ಲಾರಿಯನ್ನು ಸ್ಟಾರ್ಟ್ ಮಾಡಲು ಮುಂದಾದಾಗ ಲಾರಿಯು ಒಂದು ಭಾಗಕ್ಕೆ ವಾಲಿಕೊಂಡಿದ್ದು ಗಮನಕ್ಕೆ ಬಂದಿದೆ. ಕೂಡಲೇ ಲಾರಿಯನ್ನು ಪರಿಶೀಲಿಸಿದಾಗ ಲಾರಿಯ ಹಿಂದಿನ 4 ಚಕ್ರಗಳು ಹಾಗೂ ಹೆಚ್ಚುವರಿಯಾಗಿ ಇಟ್ಟಿದ್ದ ಚಕ್ರವೂ ಕಳವಾಗಿರುವುದು ಕಂಡು ಬಂದಿದೆ. ಕಳವಾದ 5 ಚಕ್ರಗಳ ಮೌಲ್ಯ 1,85,000 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/09/2022 11:35 am