ಕುಂದಾಪುರ: ಮಾರ್ಚ್ 28ರಂದು ಮಂಗಳವಾರ ನಾಪತ್ತೆಯಾಗಿ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿ ವರಾಹಿ ಹೊಳೆಯಲ್ಲಿ ಶವವಾಗಿ ತೇಲುತ್ತಿದ್ದ ವ್ಯಕ್ತಿ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಚೌಕುಡಿ ಬೆಟ್ಟು ನೆರಂಬಳ್ಳಿ ನಿವಾಸಿ ವಿನಯ ಪೂಜಾರಿ(30) ಎಂಬಾತನ ಕೊಲೆಯಾಗಿದೆ ಎಂಬ ವರದಿ ಇದೀಗ ಕರಾವಳಿಯಲ್ಲಿ ತಲ್ಲಣ ಮೂಡಿಸಿದೆ.
ಕೊಲೆಯಾದ ವಿನಯ ಪೂಜಾರಿಯ ದೇಹವು ಕೊಳೆತ ಸ್ಥಿತಿಯಲ್ಲಿ ವಾರಾಹಿ ಹೊಳೆಯಲ್ಲಿ ತೇಲುತ್ತಿದ್ದ ಘಟನೆಗೆ ಸಂಬಂಧಿಸಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರು ತಿಂಗಳ ಬಳಿಕ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ವಿನಯ ಪೂಜಾರಿಯ ಕುತ್ತಿಗೆ ಒತ್ತಿ ಹಿಡಿದು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿನಯ ಪೂಜಾರಿ ಸ್ನೇಹಿತ ಹುಣ್ಸೆಕಟ್ಟೆ ಹೊಸ ತೊಪ್ಪಲುವಿನ ವಿಜಯ ಪೂಜಾರಿ ಮಗ ಅಕ್ಷಯ ಪೂಜಾರಿ ಸೇರಿದಂತೆ ಐದು ಜನ ಶಂಕಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆಯಾದ ವಿನಯ ಪೂಜಾರಿ ಹಾಗೂ ಪ್ರಮುಖ ಆರೋಪಿ ಅಕ್ಷಯ ಪೂಜಾರಿ ಹಾಗೂ ಇತರ ನಾಲ್ಕು ಜನರು ಒಂದೇ ವೆಲ್ಡಿಂಗ್ ಶಾಪಿನಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಪ್ರತಿ ಮಂಗಳವಾರ ವಿದ್ಯುತ್ ವ್ಯತ್ಯಯವಿರುವುದರಿಂದ ಸೌಡ ಶಂಕರನಾಯಾಣದ ಸಮೀಪ ವಾರಾಹಿ ಹೊಳೆ ಬಳಿ ಹೋಗಿ ಎಂಜಾಯ್ ಮಾಡುತ್ತಿದ್ದರು ಎನ್ನಲಾಗಿದೆ. ಮಾರ್ಚ್ 28ರಂದು ಅಕ್ಷಯ ಪೂಜಾರಿ ವಿನಯ ಪೂಜಾರಿಯನ್ನು ಆತನ ಮನೆಯಿಮದ ಕರೆದೊಯ್ದ ಬಳಿಕ ವಿನಯ್ ನಾಪತ್ತೆಯಾಗಿದ್ದ. ಬಳಿಕ ಸಿಕ್ಕಿದ್ದು ವಾರಾಹಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ. ಇದೀಗ ಶಂಕರನಾರಾಯಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Kshetra Samachara
07/09/2022 03:51 pm