ಸುರತ್ಕಲ್: ಎಲ್ಲವೂ ಅಂದುಕೊಂಡಂತೆ ಆಗಿದ್ರೆ ನಿನ್ನೆ ಸುರತ್ಕಲ್ ನಲ್ಲಿ ಹತ್ಯೆಯಾದ ಮೊಹಮ್ಮದ್ ಫಾಝಿಲ್ ಇಂದು 24ನೇ ವರ್ಷದ ಬರ್ತ್ ಡೇ ಆಚರಿಸಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ನಿನ್ನೆ ಸಂಜೆ ವೇಳೆಗೆ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಆತ ಇಂದು ಸ್ಮಶಾನದಲ್ಲಿ ಮಲಗಿದ್ದಾನೆ. ಮನೆಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿರಬೇಕಾದ ಆತನ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಫಾಝಿಲ್ ನಗರದ ಸುರತ್ಕಲ್ ಜಂಕ್ಷನ್ ಸಮೀಪದ ತಾತ್ಕಾಲಿಕ ಮಾರುಕಟ್ಟೆಯ ಬಳಿಯಿರುವ ವಸ್ತ್ರ ಮಳಿಗೆಯಲ್ಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸಬಟ್ಟೆಯನ್ನು ಖರೀದಿಸಿದ್ದಾನೆ. ಆತನೊಂದಿಗಿದ್ದ ಸ್ನೇಹಿತರು ಮೊಬೈಲ್ ಅಂಗಡಿಯೊಂದರಲ್ಲಿ ಸ್ಮಾರ್ಟ್ ವಾಚ್ ಖರೀದಿಸುತ್ತಿದ್ದರು. ಆ ವೇಳೆಗೆ ಮಳಿಗೆಯಿಂದ ಹೊರ ಬಂದು ನಿಂತಿದ್ದ ಫಾಝಿಲ್ ಮೇಲೆ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಫಾಝಿಲ್ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಹಲ್ಲೆಯನ್ನು ತಡೆಯಲು ಯತ್ನಿಸಿದರೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಆಗಂತುಕರು ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.
ಸುರತ್ಕಲ್ ಪ್ರದೇಶದ ಮಂಗಳಪೇಟೆ ಎಂಬಲ್ಲಿನ ನಿವಾಸಿ ಫಾರೂಕ್ ಎಂಬುವರ ಮೂವರು ಪುತ್ರರಲ್ಲಿ ಫಾಝಿಲ್ ಎರಡನೆಯವರು. ಫಾಝಿಲ್ ತಂದೆ ಹಾಗೂ ಸಹೋದರ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಫಾಝಿಲ್ ಸ್ಥಳೀಯ ಎಚ್ ಪಿಸಿಎಲ್ ಕಂಪೆನಿಯಲ್ಲಿ ಗ್ಯಾಸ್ ಲೋಡಿಂಗ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಯಾವ ಪಕ್ಷ, ಸಂಘಟನೆಗಳಲ್ಲೂ ಗುರುತಿಸಿಕೊಳ್ಳದ ಫಾಝಿಲ್ ಅವರು ಶಾಂತ ಸ್ವಭಾವದವರಾಗಿದ್ದರು. 2018ರಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿದ್ದರು. ಆದರೆ ಹುಟ್ಟುಹಬ್ಬ ಆಚರಿಸುವ ಮುನ್ನವೇ ಫಾಝಿಲ್ ಹತ್ಯೆಯಾಗಿರೋದು ಮಾತ್ರ ವಿಪರ್ಯಾಸವೇ ಸರಿ. ಹಲ್ಲೆಕೋರರು ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ. ಯಾಕೆ ಈ ದುಷ್ಕೃತ್ಯ ಎಸಗಲಾಗಿದೆ, ಫಾಝಿಲ್ ಮೇಲೆ ಯಾಕೆ ಇಂತಹ ದ್ವೇಷ ಎಂಬುದು ತನಿಖೆಯಿಂದಷ್ಟೇ ಬಯಲಾಗಬೇಕಿದೆ.
PublicNext
29/07/2022 05:05 pm