ಮಂಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರ್‌ಗೆ ತಮ್ಮ ಮೇಲೆ ದಾಳಿ ನಡೆಯುವ ಸುಳಿವು ಸಿಕ್ಕಿತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ ಪ್ರವೀಣ್ ಸಹೋದರ ರಂಜಿತ್ ನೀಡಿರುವ ಸ್ಫೋಟಕ ಮಾಹಿತಿ.
ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿರುವ ಪ್ರವೀಣ್ ಸಹೋದರ ರಂಜಿತ್, "ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕೂಡಲೇ ಕರೆಗಳು ಬರುತ್ತಿದ್ದವು. ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ತಿಳಿಸಲಾಗಿತ್ತು" ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಂಜಿತ್, ಒಂಬತ್ತು ತಿಂಗಳ ಹಿಂದೆಯಷ್ಟೇ ಪ್ರವೀಣ್ ಬೆಳ್ಳಾರೆಯಲ್ಲಿ ದೊಡ್ಡ ಚಿಕನ್ ಅಂಗಡಿ ತೆರೆದಿದ್ದರು. ಇದೇ ಕೊಲೆಗೆ ಕಾರಣ ಇರಬಹುದು. ಇದರ ಹಿಂದೆ ಬಹು ದೊಡ್ಡ ಜಾಲವೇ ಇದೆ. ಝಾಕೀರ್ ಮತ್ತು ಷಫೀಕ್ ಪ್ರಮುಖ ಆರೋಪಿಗಳಲ್ಲ. ಇವರ ಹಿಂದೆ ದೊಡ್ಡ ಜಾಲವಿದೆ ಎಂದಿದ್ದಾರೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವರ ಅಂಗಡಿ ಬಳಿ ಬೈಕ್‌ನಲ್ಲಿ ಬಂದ ಮೂವರು ಹಿಂದಿನಿಂದ ದಾಳಿ ನಡೆಸಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಕೊನೆಯುಸಿರೆಳೆದಿದ್ದರು.
PublicNext
29/07/2022 03:44 pm