ಸುಳ್ಯ: ಬಾಟಲಿಯಿಂದ ಯುವಕನೊಬ್ಬನ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣದ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಜು. 19ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಸ್ಥಳೀಯ ನಿವಾಸಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜೀತ್ ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರು ಬಂಧಿತ ಆರೋಪಿಗಳು.
ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ (18 ವರ್ಷ) ಹಲ್ಲೆಗೊಳಗಾದ ಯುವಕ. ಮೊನ್ನೆ ಸಂಜೆ ಇಲ್ಲಿನ ವಿಷ್ಣು ನಗರದಲ್ಲಿ ಖಾಸಗಿ ಸಮಾರಂಭವೊಂದು ನಡೆದಿದ್ದು ಅದಕ್ಕೆ ಮಸೂದ್ ಬಂದಿದ್ದ. ಈ ವೇಳೆ ಅಲ್ಲಿ ಸಮೀಪದ ಅಂಗಡಿಯ ಬಳಿ ಆರೋಪಿ ಸುದೀರ್ ನಿಂತಿದ್ದು, ಕ್ಷುಲ್ಲಕ ಕಾರಣಕ್ಕೆ ಮಸೂದ್ ಹಾಗೂ ಆರೋಪಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಪರಿಣಾಮ ಎಂಟು ಜನ ಆರೋಪಿಗಳು ಒಟ್ಟು ಸೇರಿ ಏಕಾಏಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿತ್ತು. ಇವರಲ್ಲಿ ಅಭಿಲಾಶ್ ಎಂಬಾತ ಖಾಲಿ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರದಲ್ಲಿ ಮಸೂದ್ ನ ಗೆಳೆಯರು ಹುಡುಕಾಟ ನಡೆಸುವಾಗ ತಡ ರಾತ್ರಿ 1.30ರ ವೇಳೆ ಅಲ್ಲಿಯೇ ಅಬೂಬಕ್ಕರ್ ಎಂಬವರ ಬಾವಿಯ ಬಳಿ ಮಸೂದನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಳಿಕ ಆತನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿನ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಡೀಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾನೀಫ್ ಎಂಬಾತ ನೀಡಿದ ದೂರಿನಂತೆ ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಕಲಂ :143, 147, 323, 324, 307 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿದೆ. ಮಸೂದ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
Kshetra Samachara
21/07/2022 12:54 pm