ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಕಾವೂರಿನ ತರಕಾರಿ ವ್ಯಾಪಾರಿಯ ಮೇಲೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ನಗರದ ಪಂಜಿಮೊಗರು ನಿವಾಸಿ ಮುಸ್ತಫಾ(35) ಲೈಂಗಿಕ ಕಿರುಕುಳ ನೀಡಿದ ಆರೋಪಿ.
ಅಪ್ರಾಪ್ತ ಬಾಲಕಿ ಬಾಡಿಗೆ ಮನೆಯ ನಿವಾಸಿಯಾಗಿದ್ದಾಳೆ. ಆಕೆ ಆರೋಪಿ ಮುಸ್ತಫಾನ ಅಂಗಡಿಗೆ ತರಕಾರಿ ಕೊಳ್ಳಲು ಹೋಗುತ್ತಿದ್ದಾಗ ತನ್ನ ಮೊಬೈಲ್ ನಂಬರ್ ನೀಡಿ ಫೋನ್ ಮಾಡುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಫೋನ್ ಮಾಡುತ್ತಿರಲಿಲ್ಲ. ಆದರೆ ತುರ್ತು ಅವಶ್ಯಕತೆಯಿಂದ ಆರೋಪಿಯ ಮೊಬೈಲ್ ಗೆ ಕರೆ ಮಾಡಿದ್ದ ವೇಳೆ ಆತ ತಾಯಿಯ ಮೊಬೈಲ್ ನಲ್ಲಿ ನಂಬರ್ ಅನ್ನು ಸೇವ್ ಮಾಡಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಜು.8ರಂದು ಬಾಲಕಿ ಮನೆಯಲ್ಲಿ ಓರ್ವಳೆ ಇದ್ದ ವೇಳೆ ಮನೆಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲ್ಲುವ ಬೆದರಿಕೆಯೊಡ್ಡಿದ್ದ. ಆದ್ದರಿಂದ ಹೆದರಿ ಈ ಕೃತ್ಯದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಜು.16ರಂದು ತಾಯಿಗೆ ಈ ವಿಷಯ ತಿಳಿಸಿದ ಬಳಿಕ ದೂರು ನೀಡಲಾಗಿದೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.
PublicNext
18/07/2022 11:13 am