ಬ್ರಹ್ಮಾವರ: ವರ್ಷದ ಹಿಂದೆ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್ ನನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಗಾಂಧೇವಿ ನಿವಾಸಿ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ಎಂದು ಗುರುತಿಸಲಾಗಿದೆ.
2021 ಜುಲೈ 12 ರಂದು ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗರನ್ನು ಭೀಕರವಾಗಿ ಕೊಲೆ ಮಾಡಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಂಗಳಸೂತ್ರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಲಾಗಿತ್ತು. ಈ ಕೊಲೆಯ ಸೂತ್ರದಾರನಾದ ಪತಿ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದು ಕೊಂಡು ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದ.
ಮೃತ ವಿಶಾಲ ಗಾಣಿಗ ಗಂಡ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಕ್‌ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಬಂಧಿಸಿದ್ದು ಆರೋಪಿಗಳು ಕಳೆದ ಒಂದು ವರ್ಷದಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಇವರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಹತ್ಯೆ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ.ಇದೀಗ ಈತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
PublicNext
09/07/2022 07:15 pm