ಬೆಳ್ಮಣ್ : ಮದ್ಯ ಕುಡಿಯಲು ಹಣ ನೀಡದ್ದಕ್ಕೆ ಚೂರಿಯಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಮುಂಡೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ನಡೆದಿದೆ. ಸತೀಶ್ ಪೂಜಾರಿ ಅಲಿಯಾಸ್ ಮುನ್ನ ಆರೋಪಿ. ಸುನೀಲ್ ಟಿ.ಕುಲಾಲ್ (46) ಹಲ್ಲೆಗೊಳಗಾದವರು.
ಸುನೀಲ್ ಅವರಲ್ಲಿ ಸತೀಶ ಎಂಬಾತ ಮದ್ಯ ಕುಡಿಯಲು ಆಗಾಗ ಹಣ ಕೇಳಿ ಪಡೆಯುತ್ತಿದ್ದು, ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದರು. ಬುಧವಾರ ಉಡುಪಿಗೆ ಹೋಗಲು ಸಚ್ಚೇರಿಪೇಟೆ ಬಸ್ಸು ನಿಲ್ದಾಣದ ಬಳಿ ನಿಂತುಕೊಂಡಿದ್ದಾಗ ಅಲ್ಲಿಗೆ ಬಂದ ಆರೋಪಿ, ಮತ್ತೆ ಹಣ ಕೇಳಿದ್ದು, ತನ್ನಲ್ಲಿ ಹಣವಿಲ್ಲ ಎಂದು ಹೇಳಿ ಸುನೀಲ್ ಉಡುಪಿಗೆ ಹೋಗಿದ್ದರು. ರಾತ್ರಿ ಉಡುಪಿಯಿಂದ ವಾಪಾಸು ಬಂದು ಸಚ್ಚೇರಿಪೇಟೆ ಬಸ್ಸು ನಿಲ್ದಾಣದಲ್ಲಿ ಇಳಿದಾಗ ಸತೀಶ್ ಮತ್ತೆ ಮತ್ತೆ ಹಣ ಕೊಡುವಂತೆ ಪೀಡಿಸಿದ್ದು, ಹಣ ನೀಡಲು ನಿರಾಕರಿಸುತ್ತಿದ್ದಂತೆ ತನ್ನಲ್ಲಿದ್ದ ಚೂರಿಯಿಂದ ಸುನಿಲ್‌ಗೆ ಇರಿದು ಜೀವ ಬೆದರಿಕೆ ಹಾಕಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
08/07/2022 03:11 pm