ಉಳ್ಳಾಲ: ಉದ್ಯಮಿಯೋರ್ವರು ಮನೆ ಮಂದಿಯೊಂದಿಗೆ ಕೇರಳದ ಚೋಟನಿಕೆರೆ ಭಗವತೀ ಕ್ಷೇತ್ರಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಭಾರೀ ಪ್ರಮಾಣದ ನಗ,ನಗದನ್ನು ಕದ್ದೊಯ್ದ ಘಟನೆ ಉಳ್ಳಾಲ ಬೈಲಿನ ,ಬಂಗೇರ ಲೇನ್ ಎಂಬಲ್ಲಿ ನಡೆದಿದೆ.
ಉಳ್ಳಾಲ ಬೈಲು ,ಬಂಗೇರ ಲೇನ್ ನಿವಾಸಿ ಉದ್ಯಮಿ ಶಿವ. ಕೆ ಎಂಬವರ ಮನೆಯಲ್ಲಿ ಈ ಕಳ್ಳತನವಾಗಿದ್ದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲಿನ ಚಿಲಕ ಒಡೆದು ಒಳ ನುಗ್ಗಿದ ಕಳ್ಳರು ಸುಮಾರು 13 ಲಕ್ಷ ರೂಪಾಯಿ ಮೌಲ್ಯದ 210 ಗ್ರಾಂ ಚಿನ್ನ ಮತ್ತು 37,000 ರೂ. ನಗದು ಎಗರಿಸಿದ್ದಾರೆ.
ಶಿವ ಅವರು ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ಕೇರಳದ ಚೋಟನಿಕೆರೆ ಭಗವತೀ ಕ್ಷೇತ್ರಕ್ಕೆ ಹರಕೆ ತೀರಿಸಲೆಂದು ತೆರಳಿದ್ದರು.ಇಂದು ಬೆಳಿಗ್ಗೆ ಕುಟುಂಬ ವಾಪಸ್ಸಾದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಶಿವ ಅವರ ಕುಟುಂಬವನ್ನ ಹತ್ತಿರದಿಂದಲೇ ಬಲ್ಲವರು ಕಳ್ಳತನ ನಡೆಸಿರುವುದಾಗಿ ಶಂಕಿಸಲಾಗಿದೆ. ಶಿವ ಅವರ ಜರ್ಮನ್ ಶೇಪರ್ಡ್ ಸಾಕು ನಾಯಿ ಕಳೆದ ಕೆಲ ದಿನಗಳ ಹಿಂದಿಯಷ್ಟೆ ಕಾಯಿಲೆಯಿಂದ ಸತ್ತು ಹೋಗಿತ್ತು.ನಾಯಿ ಇರುವಿಕೆಯ ಬಗ್ಗೆ ತಿಳಿದಿದ್ದ ಕಳ್ಳರು ಅದನ್ನ ಯಾಮಾರಿಸಲು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಚಪಾತಿಯನ್ನು ತಂದಿದ್ದು ನಾಯಿ ಕಾಣಸಿಗದೆ ಅದನ್ನ ಕಂಪೌಡ್ ಹೊರಗಡೆ ಎಸೆದಿದ್ದಾರೆ.
ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಶ್ವಾನ ದಳ,ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/06/2022 05:12 pm