ಕೋಟ: ಉಡುಪಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಹನ್ನೆರಡು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್ ಕಳ್ಳರಿಬ್ಬರನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿ, ಒಂಬತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆಯ ಸೋಮಶೇಖರ(21) ಮತ್ತು ಬಾಗಲಕೋಟೆ ಜಿಲ್ಲೆಯ ಶಂಕರ ಗೌಡ (23)ಬಂಧಿತ ಆರೋಪಿಗಳು. ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿದ್ದ ಸಂದರ್ಭ ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್ ಬಳಿ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿದ್ದು, ವಾಹನದ ಬಳಿ ಇದ್ದ ಇಬ್ಬರನ್ನು ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದಿರುವುದರಿಂದ ತನಿಖೆ ನಡೆಸಿದ್ದು, ಆಗ ಅದು ಕಳ್ಳತನ ಮಾಡಿದ ಬೈಕ್ ಎನ್ನುವುದು ತಿಳಿದುಬಂದಿದೆ.
ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಅವರು ಕಳೆದ ಮೂರು ವರ್ಷಗಳಿಂದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ. ಕಾರ್ಮಿಕರಾಗಿ ದುಡಿಯಲು ಬಂದವರು ಉಡುಪಿ ನಗರ ಠಾಣೆಯಲ್ಲಿ ಏಳು, ಬ್ರಹ್ಮಾವರ ಠಾಣೆಯ ಒಂದು, ಶಂಕರನಾರಾಯಣ ಠಾಣೆಯ ಒಂದು, ಶೃಂಗೇರಿ ಠಾಣೆಯ ಒಂದು, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ ಒಂದು ಮತ್ತು ದಾವಣಗೆರೆ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ತನಿಖೆಯಿಂದ ತಿಳಿದುಬಂದಿದೆ. ಇವುಗಳಲ್ಲಿ ಮೂರು ಪಲ್ಸರ್ ಬೈಕ್, ಐದು ಸ್ಪ್ಲೆಂಡರ್ ಬೈಕ್ ಮತ್ತು ಒಂದು ಹೀರೋ ಡಿಲಕ್ಸ್ ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ನಾಲ್ಕೂವರೆ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
Kshetra Samachara
11/06/2022 11:22 am