ಬೆಳ್ತಂಗಡಿ: ಕೆಲವೊಂದು ಮನಸ್ತಾಪಗಳು, ಹೊಂದಾಣಿಕೆ ಇಲ್ಲದ ಕಾರಣಗಳಿಗೆ ನಿಶ್ಚಯಗೊಂಡ ಮದುವೆ ರದ್ದಾಗೋದನ್ನು ನಾವು ನೋಡುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಕಾರಣಕ್ಕೆ ಮದುವೆಯೊಂದು ರದ್ದಾಗಿದೆ. ಕಾರಣ ಕೇಳಿದರೆ ಎಲ್ಲರೂ ಆಶ್ಚರ್ಯಚಕಿತರಾಗೋದರಲ್ಲಿ ಸಂಶಯವೇ ಇಲ್ಲ.
ಹೌದು. ಬೆಳ್ತಂಗಡಿ ತಾಲೂಕಿನ ನಾರಾವಿಯ ಕಲ್ಯಾಣ ಮಂಟಪವೊಂದರಲ್ಲಿ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ. ನಾರಾವಿ ನಿವಾಸಿ ವರನಿಗೆ ಮೂಡುಕೊಣಾಜೆಯ ಯುವತಿಯೊಂದಿಗೆ ನಡೆಯುತ್ತಿದ್ದ ವಿವಾಹ ರದ್ದಾಗಲು ಕಾರಣವಿಷ್ಟೇ. ಮದುವೆ ಮಂಟಪದಲ್ಲಿ ವಧು- ವರರು ಹಾರ ಬದಲಾಯಿಸುತ್ತಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಧಾರೆ ನೆರವೇರಿ ತಾಳಿ ಕಟ್ಟಿ ಅವರಿಬ್ಬರೂ ದಂಪತಿಯಾಗುತ್ತಿದ್ದರು. ಆದರೆ ಹಾರ ಬದಲಾಯಿಸುವ ಸಂದರ್ಭದಲ್ಲಿ ವರನ ಕೈ ವಧುವಿಗೆ ಸ್ಪರ್ಶಿಸಿದೆ. ಅಷ್ಟಕ್ಕೇ ಕುಪಿತಗೊಂಡ ವಧು ಕುತ್ತಿಗೆಯಿಂದ ಹಾರವನ್ನು ತೆಗೆದೆಸೆದು, ವರನಿಗೆ ಬೈದಿದ್ದಾಳೆ.
ಇದರಿಂದ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ವರ ಹಾಗೂ ವಧುವಿನ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ತಕ್ಷಣ ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ವರ ಮಾತ್ರ ವಿವಾಹವನ್ನು ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ ಮದುವೆಗೆಂದು ಸುಮಾರು ಸಾಲ ಮಾಡಿದ್ದು ಖರ್ಚಾಗಿರುವ ಎಲ್ಲಾ ಹಣವನ್ನು ಹುಡುಗಿಯ ಕಡೆಯವರೇ ನೀಡಬೇಕು ಎಂದು ಹಠ ಹಿಡಿದಿದ್ದಾನೆ. ಬಳಿಕ ಪೊಲೀಸರು ಎರಡೂ ಕಡೆಯವರನ್ನೂ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
Kshetra Samachara
28/05/2022 09:29 am