ಉಳ್ಳಾಲ: ಉಳ್ಳಾಲ ಕೋಟೆಪುರದಲ್ಲಿ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗೆ ತಡೆಯೊಡ್ಡಿದ ಸ್ಥಳೀಯರಲ್ಲಿ ಐವರು ಫ್ಯಾಕ್ಟರಿ ಮಾಲೀಕನೊಂದಿಗೆ ಹಣಕಾಸಿನ ಡೀಲ್ ನಡೆಸಿದ್ದು, ಇದನ್ನು ವಿರೋಧಿಸಿದ ಯುವಕನನ್ನು ಅಪಹರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಕೋಟೆಪುರ ನಿವಾಸಿ ಮುಹಮ್ಮದ್ ಕಬೀರ್ ( 24) ರನ್ನು ಐವರ ತಂಡ ಅಪಹರಿಸಿ ಚಾರ್ಮಾಡಿ ಘಾಟಲ್ಲಿ ಕೊಲೆಗೆ ಯತ್ನಿಸಿದೆ.
ಕೋಟೆಪುರದಲ್ಲಿ ಇತ್ತೀಚೆಗೆ ನಿರ್ಮಾಣಗೊಂಡು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿ ವಿರುದ್ಧ ಸ್ಥಳೀಯರು ಡಿ.ಸಿ.ಗೆ ದೂರು ನೀಡಿ ತಡೆಯಾಜ್ಞೆ ತಂದಿದ್ದರು.
ಸಾಮೂಹಿಕವಾಗಿ ಫ್ಯಾಕ್ಟರಿ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜಾಗಿದ್ದು, ಹೋರಾಟಗಾರರಲ್ಲಿ ಐವರಾದ ಸದಕತುಲ್ಲಾ ಯಾನೆ ಪೊಪ್ಪ, ಬಿನ್ನಿ, ಉಗ್ರಾಣಿ ಮುನ್ನ, ರಮೀಝ್, ರಾಕೀಬ್ ಜತೆಯಾಗಿ ಫ್ಯಾಕ್ಟರಿ ಮಾಲೀಕನಿಂದ 48 ಲಕ್ಷ ರೂ.ಗೆ ಡೀಲ್ ಕುದುರಿಸಿ ಹೋರಾಟದಿಂದ ಹಿಂದೆ ಸರಿದಿದ್ದಲ್ಲದೆ, ತಡೆಯಾಜ್ಞೆ ಹಿಂಪಡೆಯುವಂತೆ ಮಾಡಿದ್ದರೆಂದು ಆರೋಪ ಕೇಳಿ ಬಂದಿದೆ.
ಐವರು ಹಣದ ಡೀಲ್ ನಡೆಸಿದ ವಿಚಾರ ಕಬೀರ್ ಗೆ ತಿಳಿದು, ಈ ಬಗ್ಗೆ ತಗಾದೆ ಎತ್ತಿ ಸ್ಥಳೀಯರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರಂತೆ. ನಿನ್ನೆ ರಾತ್ರಿ 9ರ ವೇಳೆ ಕಬೀರ್, ಅಬ್ಬಕ್ಕ ವೃತ್ತ ಬಳಿ ಬೈಕಲ್ಲಿ ತೆರಳುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿದೆ. ನೆಲಕ್ಕುರುಳಿದ ಕಬೀರ್ ನನ್ನು ಕಾರಿನಿಂದ ಇಳಿದ ತಂಡ ಅಪಹರಿಸಿದೆ.
ಕಾರೊಳಗಡೆ ಇದ್ದ ದುಷ್ಕರ್ಮಿಗಳು ಗನ್ ಹಿಡಿದು ನಶೆಯಲ್ಲಿದ್ದು, ಕಬೀರ್ ಗೆ ಹಲ್ಲೆಗೈದು ಡ್ಯಾಗರಲ್ಲಿ ಚುಚ್ಚಿದ್ದಾರೆ. ಚಾರ್ಮಾಡಿ ಘಾಟ್ ಸಮೀಪ ಕಾರು ನಿಲ್ಲಿಸಿದ ತಂಡ, ಡ್ರಾಗರ್ ನಿಂದ ಕುತ್ತಿಗೆಗೆ ಇರಿಯಲು ಯತ್ನಿಸುತ್ತಿದ್ದಂತೆ, ಕಬೀರ್ ಕಾರಿನಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ.
ಕಬೀರ್ ಗೆ ದೂರದಲ್ಲಿ ಮನೆಯೊಂದು ಗೋಚರಿಸಿ , ಅಲ್ಲಿ ತೆರಳಿ ವಿಚಾರ ತಿಳಿಸಿದ್ದಾರೆ. ಮನೆಮಂದಿ ಟೀ ಶರ್ಟ್, ಚಪ್ಪಲಿ ಒದಗಿಸಿ ಬಳಿಕ ರಿಕ್ಷಾದಲ್ಲಿ ಮಂಗಳೂರಿಗೆ ಬಿಡುವಂತೆ ತಿಳಿಸಿದ್ದಾರೆ. ಗಾಯಾಳು ಕಬೀರ್, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. ಅಪಹರಿಸಿದ ತಂಡದಲ್ಲಿ ಉಗ್ರಾಣಿ ಮುನ್ನ, ತಾಯಿಫ್, ಅಶ್ರಫ್, ಅಸ್ಗರ್, ಇಬ್ಬಿ ಎಂಬವರು ಇದ್ದರೆಂದು ಕಬೀರ್ ತಿಳಿಸಿದ್ದಾರೆ.
Kshetra Samachara
26/05/2022 10:32 pm