ಶಂಕರನಾರಾಯಣ : ಪತಿಯೊಬ್ಬ ಕುಡಿದು ಬಂದು ತನ್ನ ಪತ್ನಿಯನ್ನು ಹೊಡೆದು ಕೊಂದ ಘಟನೆ ವಂಡಾರು ಗ್ರಾಮದ ಕಟ್ಟೆಕೊಡ್ಲು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಟ್ಟೆಕೊಡ್ಲು ನಿವಾಸಿ ಅನಿತಾ (35) ಕೊಲೆಗೀಡಾಗಿದ ಮಹಿಳೆಯಾಗಿದ್ದಾರೆ. ತಲೆಮರೆಸಿಕೊಂಡಿರುವ ಅವರ ಪತಿ, ಕೊಲೆ ಆರೋಪಿ ಸುರೇಂದ್ರ ನಾಯ್ಕ(42) ಎಂಬಾತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸುರೇಂದ್ರ ನಾಯ್ಕ ಪತ್ನಿ ಮಕ್ಕಳ ಜೊತೆ ಕಟ್ಟೆಕೊಡ್ಲುವಿನಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ನಾಯ್ಕಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಪ್ರತಿದಿನ ಕುಡಿದು ಬರುತ್ತಿದ್ದ ಸುರೇಂದ್ರ ನಾಯ್ಕ, ಪತ್ನಿ ಮತ್ತು ಮಕ್ಕಳಿಗೆ ನಿತ್ಯ ಹೊಡೆಯುತ್ತಿದ್ದ ಎಂದು ದೂರಲಾಗಿದೆ.
ಈತ ನಿನ್ನೆ ರಾತ್ರಿ ಮನೆಯಲ್ಲಿ ಅನಿತಾಗೆ ಕೈಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅನಿತಾ, ಸ್ಥಳ ದಲ್ಲಿಯೇ ಮೃತಪಟ್ಟರು. ಪತ್ನಿಯ ಕೊಲೆಗೈದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/05/2022 09:27 pm