ಪಬ್ಲಿಕ್ ನೆಕ್ಸ್ಟ್ ಕ್ರೈಂ ಫಾಲೊಅಪ್
ವರದಿ: ರಹೀಂ ಉಜಿರೆ
ಉಡುಪಿ: ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗ ಎಂಬಲ್ಲಿ ತಾಯಿ,ಮಗಳ ಕೊಲೆಗಾರನನ್ನು ಪೊಲೀಸರು 48 ಗಂಟೆಯೊಳಗೆ ಬಂಧಿಸಿದ್ದಾರೆ.ಕೊಲೆಗಾರ ಬೇರಾರೂ ಅಲ್ಲ ,ಮಹಿಳೆಯ ಹತ್ತಿರದ ಸಂಬಂಧಿಯೇ.ಕುತೂಹಲದ ಸಂಗತಿಯೆಂದರೆ ,ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಆರೋಪಿ ಪೀಡಿಸುತ್ತಿದ್ದ.ಆಕೆ ಒಪ್ಪದಿದ್ದಾಗ ತಾಯಿ ಮಗಳನ್ನು ಕೊಂದು ಹಾಕಿದ್ದಾನೆ.
ಮೂರು ದಿನಗಳ ಹಿಂದೆ ಅತ್ರಾಡಿ ಸಮೀಪದ ಮನೆಯೊಂದರಲ್ಲಿ ಗೃಹಿಷಿ ಚೆಲುವಿ (28) ಮತ್ತು ಪ್ರಿಯಾ 10 ವರ್ಷ ಪ್ರಾಯದ ಮಗಳ ಶವ ಪತ್ತೆಯಾಗಿತ್ತು.ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬುದು ಸ್ಪಷ್ಟವಾಗಿತ್ತು.ಆದರೆ ಕೊಲೆಗಾರ ಬೇಟೆ ಮುಗಿಸಿ ಪರಾರಿಯಾಗಿದ್ದ.ತನಿಖೆಗೆ ತಂಡ ರಚನೆ ಮಾಡಿದ ಉಡುಪಿ ಎಸ್ಪಿ ವಿಷ್ಣುವರ್ಧನ ,ಆರೋಪಿಯನ್ನು ಕೇವಲ 48 ತಾಸಿನೊಳಗೆ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ ಯಾನೆ ಗಣೇಶ (29) ಈ ಜೋಡಿ ಕೊಲೆಯ ಆರೋಪಿ.
ಮೇ.8 ರಂದು ರಾತ್ರಿ ಈತ ಎಂದಿನಂತೆ ತನ್ನ ಸಂಬಂಧಿ ಮತ್ತು ಪ್ರಿಯತಮೆ ಚೆಲುವಿ ಮನೆಗೆ ಬಂದಿದ್ದಾನೆ.ಬಂದಾಗ ಆಕೆ ಯಾರ ಜೊತೆಗೋ ಫೋನಿನಲ್ಲಿ ಮಾತನಾಡುತ್ತಿದ್ದಳು.ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡ ಆರೋಪಿ ,ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಚೆಲುವಿಯ ಸಂಬಂಧಿಯಾಗಿದ್ದ ಹರೀಶ ಯಾನೆ ಗಣೇಶನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.ಆದರೆ ಚೆಲುವಿ ಗಂಡನಿಂದ ದೂರವಾಗಿದ್ದಳು. ಗಂಡನಿಂದ ದೂರವಾಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಮದುವೆ ಆಗಬೇಕೆಂದು ಒತ್ತಾಯಿಸುತ್ತಿದ್ದ. ಚೆಲುವಿಗೆ ಬೇರೆ ಅಫೇರ್ ಇದೆ ಎಂದು ಸಂಶಯಪಡುತ್ತಿದ್ದ.ಹೀಗೆ ಸಂಶಯದಿಂದ ದ್ವೇಷಗೊಂಡು ಅಕೆಯನ್ನು ಕೊಲೆ ಮಾಡಿ ,ಮಗಳು ಸಾಕ್ಷಿ ಹೇಳುತ್ತಾಳೆ ಎಂದು ಭಯಗೊಂಡು ,ಹತ್ತು ವರ್ಷದ ಮಗುವನ್ನೂ ಕೊಂದಿದ್ದಾನೆ.ನಂತರ ಆಕೆಯ ಚಿನ್ನಾಭರಣ ಮತ್ತು ಮೊಬೈಲನ್ನು ಕದ್ದು ಪರಾರಿಯಾಗಿದ್ದಾನೆ.
ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಹಿರಿಯಡಕ ಪಿ.ಎಸ್.ಐ ಅನಿಲ್ ಬಿ ಮಾದರ, ಮಧು ಬಿ.ಇ, ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ ಮರಬದ, ರವಿ ಬಿ ಕಾರಗಿ ಸಿಬ್ಬಂದಿಯವರಾದ ರಾಘವೇಂದ್ರ ಮತ್ತು ನಿತಿನ್ ರವರ ವಿಶೇಷ ತಂಡವು ಆರೋಪಿಯ ಹೆಡೆಮುರಿ ಕಟ್ಟಿದೆ.ಪೊಲೀಸರ ಈ ತಕ್ಷಣದ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
PublicNext
12/05/2022 09:24 pm