ಮಂಗಳೂರು: ಮಹಿಳೆಯೋರ್ವರ ಕರಿಮಣಿ ಸರ ಕಿತ್ತು ಪರಾರಿಯಾದ ಖದೀಮ ಕಳ್ಳರೀರ್ವರ ಸಹಿತ ಕದ್ದ ಮಾಂಗಲ್ಯ ಸರವನ್ನು ಖರೀದಿಸಿರುವ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ವಾಮಂಜೂರು ತಿರುವೈಲು ಗ್ರಾಮದ ನಿವಾಸಿ ಆರೀಫ್(26), ಬೋಂದೆಲ್ ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿ ಮೊಹಮ್ಮದ್ ಹನೀಫ್(36), ಕಾವೂರು ನಕ್ಷತ್ರ ಜ್ಯುವೆಲ್ಲರ್ಸ್ ನ ಅಬ್ದುಲ್ ಸಮದ್ ಪಿ.ಪಿ. ಹಾಗೂ ಮೊಹಮ್ಮದ್ ರಿಯಾಝ್ ಬಂಧಿತ ಆರೋಪಿಗಳು. ನೀರುಮಾರ್ಗ ಗ್ರಾಮದ ಪಾಲ್ದನೆ ಗ್ರಾಮದಲ್ಲಿ ಎ.24ರಂದು ಒಂಟಿಯಾಗಿ ಮಮತಾ ಎಂಬವರು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಆರೀಫ್ ಹಾಗೂ ಮೊಹಮ್ಮದ್ ಹನೀಫ್ ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಆರೋಪಿಗಳನ್ನು ಬೈಕ್ ಸಹಿತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಲ್ಲದೆ ಆರೋಪಿಗಳು ಕಾವೂರು ಬೊಲ್ಪುಗುಡ್ಡೆ ವತ್ಸಲಾ ಎಂಬವರ ಕರಿಮಣಿ ಸರವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಎರಡೂ ಕರಿಮಣಿ ಸರವನ್ನು ಖರೀದಿಸಿದ ಕಾವೂರು ನಕ್ಷತ್ರ ಜ್ಯುವೆಲ್ಲರ್ಸ್ ನ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಂದ 80,000 ರೂ. ಮೌಲ್ಯದ 18ಗ್ರಾಂ ತೂಕದ 2 ಕರಿಮಣಿ ಸರ ಹಾಗೂ 50 ಸಾವಿರ ರೂ. ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
Kshetra Samachara
25/04/2022 07:24 pm