ಮಂಗಳೂರು: ಚಿಕನ್ ಅಂಗಡಿ ಸಿಬ್ಬಂದಿಗೆ ಕಲ್ಲು, ಹೆಲ್ಮೆಟ್ ಗಳಿಂದ ಮಾರಣಾಂತಿಕ ಗಾಯಗೊಳಿಸಿ, ಚೂರಿ ತೋರಿಸಿ ಸಾರ್ವಜನಿಕ ಸ್ಥಳದಲ್ಲಿ ಭೀತಿ ವಾತಾವರಣ ಸೃಷ್ಟಿಸಿದ ರೌಡಿಶೀಟರ್ ಗಳಿಬ್ಬರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಬಜಾಲ್, ಜಲ್ಲಿಗುಡ್ಡೆ ಜಯನಗರ ನಿವಾಸಿ ಪ್ರೀತಂ ಪೂಜಾರಿ (27), ಎಕ್ಕೂರು, ಅಳಪೆ ನಿವಾಸಿ ಧೀರಜ್ ಕುಮಾರ್ (25) ಬಂಧಿತರು. ಪ್ರೀತಂ ಪೂಜಾರಿ ಹಾಗೂ ಧೀರಜ್ ಕುಮಾರ್ ನಗರದ ವೆಲೆನ್ಸಿಯಾ ಜಂಕ್ಷನ್ ಬಳಿಯ ಐಡಿಯಲ್ ಚಿಕನ್ ಮಳಿಗೆ ಬಳಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಐಡಿಯಲ್ ಚಿಕನ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಆಗ ಇಬ್ಬರೂ ಆರೋಪಿಗಳು ಐಡಿಯಲ್ ಚಿಕನ್ ಸಿಬ್ಬಂದಿ ಸುನಿಲ್ ಮಾರ್ಡಿ, ಅನಂತ ಹಾಗೂ ಜೀವನ್ ಎಂಬವರಿಗೆ ಕಲ್ಲು, ಹೆಲ್ಮೆಟ್ ಗಳಿಂದ ಹಲ್ಲೆ ನಡೆಸಿದ್ದಾರೆ.
ಅಲ್ಲದೆ, ಅವರಿಗೆ ಚೂರಿಯಿಂದ ತಿವಿಯಲು ಹೋಗಿದ್ದಾರೆ. ತಡೆಯಲು ಹೋದ ಸಾರ್ವಜನಿಕರಿಗೂ ಚಾಕುವಿನಿಂದ ತಿವಿಯಲು ಪ್ರಯತ್ನಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದ ಆರೋಪಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳಿಂದ 2 ಚೂರಿ, ಕಲ್ಲು, ಹೆಲ್ಮೆಟ್ ಗಳನ್ನು ಪೊಲೀಸರು ವಶಪಡಿಸಿದ್ದಾರೆ. ಆರೋಪಿಗಳಿಬ್ಬರೂ ಮದ್ಯಸೇವನೆ ಮಾಡಿದ್ದು, ಪ್ರೀತಂ ಪೂಜಾರಿ ಗಾಂಜಾ ಸೇವಿಸಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಗೊಂಡಿದೆ. ಇವರಿಬ್ಬರೂ ರೌಡಿಶೀಟರ್ ಗಳಾಗಿದ್ದು, ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
11/04/2022 12:12 pm