ಮಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನು ಬಳಸಿ ವೇಶ್ಯಾವಾಟಿಕೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿಗಳ ಪತ್ತೆ ಮುಂದುವರೆಸಿದ್ದು, ಇದೀಗ ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಈ ಬಾರಿಯ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದಾರೆ.
ಅಬ್ದುಲ್ ರಾಝೀಕ್ ಉಳ್ಳಾಲ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ನಗರದ ನಂದಿಗುಡ್ಡೆಯ ಫ್ಲಾಟ್‌ವೊಂದರಲ್ಲಿ ಪಿಯು ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇದೀಗ 16ನೇ ಆರೋಪಿಯಾಗಿ ಅಬ್ದುಲ್ ರಾಝೀಕ್ ಉಳ್ಳಾಲ ಬಂಧನವಾಗಿದೆ.
ಮಂಗಳೂರು ಸಿಸಿಬಿ ಪೊಲೀಸರು ಈ ಕೇಸ್‌ನ ತನಿಖೆ ಕೈಗೊಂಡಿದ್ದು, ಇಬ್ಬರು ಬಾಲಕಿಯರು ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅದರಂತೆ ಮಾರ್ಚ್ 18 ರಂದು ಉಳ್ಳಾಲದ ಅಬ್ದುಲ್ ರಾಝೀಕ್ ಉಳ್ಳಾಲ್ ಅಲಿಯಾಸ್ ರಫೀಕ್ ಉಳ್ಳಾಲನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 16 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
22/03/2022 07:24 pm