ಬಂಟ್ವಾಳ: ಬಿ.ಸಿ ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ 10.15ರ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರು, ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಸೆಳೆದು ಪರಾರಿಯಾಗಿದ್ದಾರೆ. ಈ ಕುರಿತು ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ಮಹಿಳೆ ಸುಲೋಚನಾ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.
ಮನೆಯಿಂದ ಹೊರಟು ಕೈಕುಂಜೆಯಲ್ಲಿರುವ ಮತ್ತೊಂದು ಮನೆಗೆ ಹೋಗಿ ಹೊಲಿಯಲು ಕೊಟ್ಟ ಬಟ್ಟೆಯನ್ನು ಪಡೆದುಕೊಂಡು ವಾಪಸ್ ಬರುತ್ತಿರುವ ಸಮಯ ಬೆಳಿಗ್ಗೆ 10.15 ರಿಂದ 10.25 ಗಂಟೆಯ ಮಧ್ಯೆ ಬಡಾವಣೆಯ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಬೈಕ್ ಮೇಲೆ ಬಂದಿದ್ದರು. ಹಿಂಬದಿ ಸವಾರ ತನ್ನ ಕುತ್ತಿಗೆಯಲ್ಲಿದ್ದ ಅಂದಾಜು 1 ಲಕ್ಷ ರೂ ಮೌಲ್ಯದ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ವಿವೇಕಾನಂದ ಮತ್ತವರ ತಂಡ ಕಾರ್ಯಾಚರಣೆ ನಡೆಸಲು ಆರಂಭಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹಾಡಹಗಲೇ ಇಂಥ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೀಡು ಮಾಡಿದೆ.
Kshetra Samachara
13/03/2022 06:33 pm