ಮಂಗಳೂರು: ಸಾಲ ಪಾವತಿಸಿದ ಬಳಿಕವೂ ಕಿರುಕುಳ, ಬೆದರಿಕೆಯನ್ನೊಡ್ಡಿ ಅಧಿಕ ಹಣ ಸುಲಿಗೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜೆಪ್ಪಿನಮೊಗರು ನಿವಾಸಿಗಳಾದ ಶರ್ಮಿಳಾ (48), ಮೋಹನ್ ದಾಸ್(52) ಹಾಗೂ ಬಂಟ್ವಾಳ ನಿವಾಸಿ ಶಶಿಕಿರಣ್(52) ಬಂಧಿತ ಆರೋಪಿಗಳು. ನಗರದ ನಂತೂರು ನಿವಾಸಿ ಸ್ವರೂಪ್ ಎನ್. ಶೆಟ್ಟಿ ದೂರು ನೀಡಿದವರು. ಸ್ವರೂಪ್ ನಗರದ ಜೆಪ್ಪುವಿನಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಹೊಂದಿದ್ದರು. ಅವರ ವಿದ್ಯಾರ್ಥಿಯೋರ್ವರ ತಾಯಿ ಸಾಲ ಬೇಕೆಂದು ಕೇಳಿದ್ದರು. ಆದ್ದರಿಂದ ಸ್ವರೂಪ್, ತನಗೆ ಪರಿಚಯದ ಶರ್ಮಿಳಾ ಎಂಬಾಕೆಯ ಮೂಲಕ ಹಣ ಸಾಲವಾಗಿ ಪಡೆಯಲು ಸಹಾಯ ಮಾಡಿದ್ದಾರೆ.
ಈ ಮೂಲಕ 10 ಲಕ್ಷ ರೂ. ಹಣವನ್ನು ಮಾಸಿಕ ಬಡ್ಡಿ ದರದ ಆಧಾರದಲ್ಲಿ ಸಾಲ ಕೊಡಿಸಲಾಗಿತ್ತು. ಪಡೆದ ಸಾಲಕ್ಕೆ ನಿಯಮಿತವಾಗಿ ಬಡ್ಡಿದರವನ್ನು ಕಟ್ಟಲಾಗುತ್ತಿತ್ತು. ಆದರೆ ಹಣ ಪಾವತಿ ಬಳಿಕವೂ ಹಣ ನೀಡುವಂತೆ ಆರೋಪಿಗಳು ಸ್ವರೂಪ್ ಎನ್.ಶೆಟ್ಟಿಯವರಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಅಲ್ಲದೆ ಬೆದರಿಕೆಯೊಡ್ಡಿ ಚೆಕ್ ಪಡೆದು 2016ರಿಂದ ಆರೋಪಿಗಳು ಸ್ವರೂಪ್ ರಿಂದ 50 ಲಕ್ಷ ರೂ. ಸುಲಿಗೆ ಮಾಡಲಾಗಿದೆ ಎಂದು ಪೊಲೀಸ್ ದೂರು ನೀಡಲಾಗಿದೆ. ಈ ದೂರಿನನ್ವಯ ಪೊಲೀಸರು ಶರ್ಮಿಳಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
21/02/2022 07:51 am