ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಅಜಿಲಮೊಗರು ಗ್ರಾಮದ ಅಂಜಿಮೊಗರು ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಭೂ ವಿಜ್ಞಾನಿಗಳು ದಾಳಿ ನಡೆಸಿ ಮೂರು ದೋಣಿ ಹಾಗೂ ಅಪಾರ ಪ್ರಮಾಣದ ಮರಳನ್ನು ಜಪ್ತಿ ಮಾಡಿದ್ದಾರೆ.
ಮಣಿನಾಲ್ಕೂರು ಗ್ರಾಮದಲ್ಲಿ ಅಜಿಲಮೊಗರು ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಅನ್ವಯ ದ ಕ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಸಹಯೋಗದಲ್ಲಿ ದಾಳಿ ನಡೆಸಿ ಪರಿಶೀಲಿಸಿದಾಗ ಇಲ್ಲಿ ಮೂರು ಕಬ್ಬಿಣದ ದೋಣಿಗಳಲ್ಲಿ ಮರಳನ್ನು ಜಾಲಿಯಿಂದ ತೆಗೆದು ತುಂಬಿಸಿರುವುದು ಕಂಡುಬಂದಿದೆ.
ಸ್ಥಳೀಯರ ಸಹಕಾರದಿಂದ ಒಂದು ದೋಣಿಯನ್ನು ವ್ಯವಸ್ಥೆ ಮಾಡಿಕೊಂಡು ಪರಿಶೀಲಿಸಿದಾಗ ಮೂರು ಕಬ್ಬಿಣದ ದೋಣಿಗಳಲ್ಲಿ ಮೋಟಾರು ಅಳವಡಿಸಿ ದೋಣಿಗಳಲ್ಲಿ ಸಿಲಿಂಡರ್ ಗ್ಯಾಸ್‌ಗಳನ್ನು ಅಳವಡಿಸಿಕೊಂಡು ಮರಳನ್ನು ನದಿಯಿಂದ ಎತ್ತುತ್ತಿರುವುದು ಕಂಡುಬಂದಿದೆ.
ಒಟ್ಟು 8 ಜನರಂತೆ ಮೂರು ದೋಣಿಗಳಲ್ಲಿ ಉತ್ತರ ಪ್ರದೇಶದ ಹಿಂದಿ ಭಾಷಿಗರನ್ನು ಬಳಸಿಕೊಂಡು ಮರಳು ತೆಗೆಯುತ್ತಿರುವುದು ಪತ್ತೆಯಾಗಿದೆ.
ಮರಳು ತೆಗೆಯುವ ಕಾರ್ಮಿಕರಲ್ಲಿ ಇದರ ಮಾಲಿಕರ ಕುರಿತು ವಿಚಾರಿಸಿದಾಗ ಚರಣ್ ಎಂದು ತಿಳಿಸಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಾಖಲೆಗಳ ಪರಿಶೀಲನೆಯಂತೆ ಚರಣ್ ಕುಮಾರ್ ಬಿನ್ ರವೀಂದ್ರ ಸನಿಲ್ ಎಂಬವರು ಬಂಟ್ವಾಳದ ಬರಿವಾಳಮಾಡ ಗ್ರಾಮದ ಜುಮಾದಿಗುಡ್ಡೆ ನಿವಾಸಿ ಎಂದು ಕಂಡುಬಂದಿದೆ.
ಕಡೇಶ್ವಾಲ್ಯ ಗ್ರಾಮದ ಸ.ನಂ.1/ರಲ್ಲಿ ಹೊಂದಿಕೊಂಡಂತೆ ಇರುವ ನೇತ್ರಾವತಿ ನದಿ ಪಾತ್ರದಲ್ಲಿನ 6.92 ಎಕ್ರೆ ವಿಸ್ತೀರ್ಣಕ್ಕೆ ಮರಳು ಬ್ಲಾಕ್ ಗುತ್ತಿಗೆ ಹೊಂದಿದ್ದಾರೆ. 2019ರ ಡಿ.26ರಿಂದ 5 ವರ್ಷಗಳವರೆಗೆ ಉಪಖನಿಜ ನಿಯಮಾವಳಿಯಂತೆ ಮಂಜೂರು ಮಾಡಲಾಗಿತ್ತು. ಆದರೆ ಇದರ ಅಕ್ಷಾಂಶ ಹಾಗೂ ರೇಖಾಂಶ ಪರಿಶೀಲಿಸಿದಾಗ ಮರಳು ಬ್ಲಾಕ್‌ಗೂ ಅವರು ನಡೆಸುತಿದ್ದ ಮರಳುಗಾರಿಕೆ ಸ್ಥಳಕ್ಕೆ 1.5ಕಿಲೋ ಮೀಟರ್ ಅಂತರ ಕಂಡುಬಂದಿದೆ. ಇದು ಅಕ್ರಮ ಎಂದು ಪರಿಶೀಲನೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಮರಳನ್ನು ಜಪ್ತಿ ಮಾಡಿ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಭೂ ವಿಜ್ಞಾನಿ ಡಾ. ಮಹದೇಶ್ವರ, ಮಧ್ಯಾಹ್ನ 2.49ರ ವೇಳೆ ದಾಳಿ ನಡೆಸಿದ್ದು, ಈ ವೇಳೆ 3 ಬೋಟ್, 3 ಮೋಟಾರ್ ಹಾಗೂ ಬೋಟ್‌ನಲ್ಲಿ ಅಳವಡಿಸಿದ್ದ 5 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಲಾಗಿದೆ. ಅಲ್ಲದೆ ಮೂರು ದೋಣಿಗಳ ಪೈಕಿ ಒಂದು ದೋಣಿಯಿಂದ 1 ಟನ್ ಮರಳು ಹಾಗೂ 2 ದೋಣಿಗಳಿಣದ ತಲಾ ಅರ್ಧ ಅರ್ಧ ಟನ್ ಮರಳು ವಶಪಡಿಸಿಕೊಳ್ಳಲಾಗಿದೆ. ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಕರಣಿಕರು, ಪಂಚಾಯತ್ ಅಭಿವೃಧಿ ಅಧಿಕಾರಿ ಹಾಗೂ ಪಂಚಾಯತ್ ಸಹಯೋಗ ಹಾಗೂ ಸ್ಥಳೀಯರ ಸಹಕಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
17/02/2022 01:22 pm