ಮಂಗಳೂರು: ನಗರದ ಸುರತ್ಕಲ್ ನಲ್ಲಿರುವ ಎನ್ಐಟಿಕೆ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತನೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆಗೆತ್ನಿಸಿದ ಆರೋಪದ ಮೇಲೆ ಆರು ಮಂದಿ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.
ವಾಸವಿ ಗೌಡ, ಲಿಪಿಕಾ , ಹಿಮಾ, ಆದ್ಯ, ಮಾಯಾ , ಮೈತ್ರಿ ಪೊಲೀಸರ ವಶದಲ್ಲಿರುವ ಮಂಗಳಮುಖಿಯರು. ಅನಧಿಕೃತವಾಗಿ ಈ ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಆದ್ದರಿಂದ ಈ ಟೋಲ್ ಗೇಟ್ ತೆರವಿಗೆ ಸಾಮಾಜಿಕ ಕಾರ್ಯಕರ್ತ ಆಪದ್ಬಾಂಧವ ಆಸಿಫ್ ಫೆ.7ರಿಂದ ಪ್ರತಿಭಟನೆ ಅಹೋರಾತ್ರಿ ನಡೆಸುತ್ತಿದ್ದರು. ಆದರೆ ನಿನ್ನೆ ಮಧ್ಯರಾತ್ರಿ 12.30ಕ್ಕೆ ಏಕಾಏಕಿ ಆರು ಮಂದಿ ಆಸೀಫ್ ಅವರು ಪ್ರತಿಭಟನೆ ನಡೆಸುತ್ತಿದ್ದಲ್ಲಿಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತಿಸಿದ್ದಲ್ಲದೆ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಇದೀಗ ಆರೋಪಿಗಳಾದ 6 ಮಂದಿ ಮಂಗಳಮುಖಿಯರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪದಲ್ಲಿ ಇವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/02/2022 10:25 pm