ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೈಲೆನ್ಸರ್ ಢಮಾರ್ : ಶೋಕಿ ಯುವಕರಿಗೆ ವಾರ್ನಿಂಗ್ !

ವರದಿ: ರಹೀಂ ಉಜಿರೆ

ಮಣಿಪಾಲ: ಹೇಳಿಕೇಳಿ ಮಣಿಪಾಲ ವಿದ್ಯಾಕಾಶಿ.ದೇಶ ವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.ಕಲಿಯಲು ಬರುವ ಕೆಲವರು ಶೋಕಿಗಾಗಿ ದುಬಾರಿ ಬೈಕ್ ಕಾರ್ ಗಳಲ್ಲಿ ಓಡಾಡುತ್ತಾರೆ.ಹಾಗೆ ಓಡಾಡಿದರೆ ಯಾರಿಗೂ ಸಮಸ್ಯೆ ಇರಲ್ಲ.

ಆದರೆ ಇಡೀ ಊರಿಗೇ ಸೌಂಡ್ ಮಾಡಿಕೊಂಡು ಸುತ್ತಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಮಣಿಪಾಲ ಪೊಲೀಸರು ಶಾಕ್ ನೀಡಿದ್ದಾರೆ.ಕರ್ಕಶವಾಗಿ ಶಬ್ಧ ಮಾಡುತ್ತಾ ಶಬ್ದ ಮಾಲಿನ್ಯದ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಸೈಲೆನ್ಸರ್​ಗಳ ಮೇಲೆ ರೂಲರ್ ಹತ್ತಿಸಿ ಬೈಕ್ ಸವಾರರಿಗೆ ವಾರ್ನಿಂಗ್ ನೀಡಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಜನವರಿ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.ಬೈಕ್​ಗಳಿಗೆ ದುಬಾರಿ ಸೈಲೆನ್ಸರ್​ಗಳನ್ನು ಅಳವಡಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು.ಸಾರಿಗೆ ಇಲಾಖೆ ನಿಯಮ ಗಾಳಿಗೆ ತೂರಿ ತಮ್ಮ ಶೋಕಿಗೋಸ್ಕರ ಅಳವಡಿಸಲಾದ ಬೈಕ್ ಸವಾರರ ಬೇಟೆ ನಡೆಸಿದ ಪೊಲೀಸರು ,ಸುಮಾರು 71 ಕರ್ಕಶ ,ದೋಷಪೂರಿತ ಸೈಲೆನ್ಸರ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.ಜೊತೆಗೆ ಇಂತಹ ಬೈಕ್ ಸವಾರರಿಗೆ ಭಾರೀ ದಂಡ ವಿಧಿಸಲಾಗಿತ್ತು.

ಹಾಗೆ ವಶಪಡಿಸಿಕೊಂಡ ಬಗೆಬಗೆಯ ಸೈಲೆನ್ಸರ್ ಗಳನ್ನು ಕೋರ್ಟ್ ಅನುಮತಿ‌ ಪಡೆದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ರೂಲರ್ ಹತ್ತಿಸಿ ನುಜ್ಜುಗುಜ್ಜು ಮಾಡಲಾಯಿತು. ಈ ಮೂಲಕ ಎಚ್ಚರಿಕೆ ಸಂದೇಶ ರವಾನೆ ಮಾಡಲಾಯಿತು.

Edited By : Nagesh Gaonkar
Kshetra Samachara

Kshetra Samachara

31/01/2022 05:29 pm

Cinque Terre

11.87 K

Cinque Terre

0