ಕಾರ್ಕಳ: ಜಿಲ್ಲೆಯ ಕಾರ್ಕಳ ಭಾಗದಲ್ಲಿ ಗೋಕಳ್ಳರ ಅಟ್ಟಹಾಸ ಮಿತಿಮೀರಿದ್ದು,ಇವತ್ತು ವಾಹನ ತಡೆಯಲು ಬಂದ ಪೊಲೀಸರ ಮೇಲೆಯೇ ಗಾಡಿ ಹರಿಸಲು ಯತ್ನ ನಡೆದಿದೆ.
ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ಈ ಘಟನೆ ನಡೆದಿದೆ.ಇಂದು ಬೆಳಗಿನ ಜಾವ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಮತ್ತು ಮಾರುತಿ ರಿಟ್ಸ್ ಕಾರನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಕಾರಿನೊಳಗೆ ಅಕ್ರಮವಾಗಿ ಗೋಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರು ನಿಲ್ಲಿಸಲು ಹೇಳಿದರೂ ಕಾರು ಚಾಲಕ ಪೊಲೀಸರಿಗೆ ಕ್ಯಾರೇ ಎನ್ನದೆ ಕಾರನ್ನು ಮೈಮೇಲೆ ಹರಿಸಲು ಯತ್ನಿಸಿ ಪರಾರಿಯಾಗಿದ್ದಾನೆ.
ಈ ವೇಳೆ ಜೊತೆಗೇ ಇದ್ದ ಬೈಕ್ ನ್ನು ಪೊಲೀಸರು ಬೆನ್ಬಟ್ಟಿ ಹಿಡಿದಿದ್ದಾರೆ.ತಪ್ಪಿಸುವ ಭರದಲ್ಲಿ ಬೈಕ್ ಸವಾರ ಬಿದ್ದಿದ್ದು ,ಬಳಿಕ ಆತನನ್ನು ಬಂಧಿಸಲಾಗಿದೆ.
ಘಟನೆಯಲ್ಲಿ ಕಾರ್ಕಳ ಉಪನಿರೀಕ್ಷಕ ತೇಜಸ್ವಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತಪ್ಪಿಸಿಕೊಂಡಿರುವ ಕಾರು ಮತ್ತು ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
PublicNext
30/01/2022 04:01 pm