ಮಂಗಳೂರು: ಯುವಕನೋರ್ವ ಇಬ್ಬರು ಯುವತಿಯರ ಜೊತೆ ಬೆಳೆಸಿದ ಪ್ರೇಮ ವಿಚಾರಕ್ಕೆ ಸಂಬಂಧಿಸಿ ಉಂಟಾದ ಕಲಹದಲ್ಲಿ ಯುವತಿಯೊಬ್ಬಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ರಕ್ಷಿಸಲು ಹೋದ ಆ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳೂರಿನ ಸೋಮೇಶ್ವರದಲ್ಲಿ ಸಂಭವಿಸಿದೆ.
ಸ್ಥಳೀಯ ರಾಣಿಪುರದ ಲಾಯ್ಡ್ ಡಿಸೋಜ (28) ಮೃತಪಟ್ಟ ಯುವಕ. ಈತ ಪನೀರ್ ನಿವಾಸಿ ಅಶ್ವಿತಾ ಫೆರಾವೋ ಎಂಬಾಕೆಯ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಈ ಮಧ್ಯೆ ಚೆಂಬುಗುಡ್ಡೆಯ ಯುವತಿಯನ್ನು ಕೂಡ ಪ್ರೀತಿಸುತ್ತಿದ್ದ! ಈ ವಿಚಾರ ತಿಳಿದ ಅಶ್ವಿತಾ, ಲಾಯ್ಡ್ ಜತೆ ಜಗಳವಾಡಿದ್ದಳು. ಸಮಸ್ಯೆ ಇತ್ಯರ್ಥ ಪಡಿಸಲು ಸೋಮೇಶ್ವರದಲ್ಲಿ ಮಾತುಕತೆ ನಡೆಸುವ ಉದ್ದೇಶದಿಂದ ಲಾಯ್ಡ್ ಡಿಸೋಜ, ಈ ಇಬ್ಬರನ್ನೂ ಕರೆದುಕೊಂಡು ಸೋಮೇಶ್ವರಕ್ಕೆ ಬಂದಿದ್ದ.
ಈ ವೇಳೆ ಅಸಮಾಧಾನಗೊಂಡ ಅಶ್ವಿತಾ ಫೆರಾವೋ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ! ಈ ವೇಳೆ ಲಾಯ್ಡ್ ಡಿಸೋಜ ಕೂಡ ಸಮುದ್ರಕ್ಕೆ ಹಾರಿದ್ದು, ಯುವತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ಲಾಯ್ಡ್ ಡಿಸೋಜ ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
29/01/2022 10:46 am