ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆ ಎಂಬಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಏಳಿಂಜೆ ಪಟ್ಟೆ ಶಾಂಭವಿ ನದಿಯಲ್ಲಿ ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಆಕ್ರೋಶ ಗೊಂಡ ಗ್ರಾಮಸ್ಥರು ಸೋಮವಾರ ಮಂಗಳೂರು ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಮತ್ತು ಗಣಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಗಣಿ ಅಧಿಕಾರಿ ಪದ್ಮಶ್ರೀ ,ಮುಲ್ಕಿ ತಹಶೀಲ್ದಾರ್ ಕಮಲಮ್ಮ, ಐಕಳ ಗ್ರಾಮಕರಣಿಕ ಜಂಟಿಯಾಗಿ ಮರಳುಗಾರಿಕೆ ಪ್ರದೇಶದಲ್ಲಿ ದಾಳಿ ನಡೆಸಿದ್ದು ನದಿಯಲ್ಲಿ ಮೂರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮಸ್ಥರೇ ದೋಣಿಗಳನ್ನು ದಡಕ್ಕೆ ತರಲು ಸಹಕರಿಸಿದ್ದಾರೆ.
ಸುಮಾರು 20 ದೋಣಿಗಳಲ್ಲಿ ಮರಳು ತೆಗೆಯುತ್ತಿದ್ದು ಬೇರೆ ದೋಣಿಗಳನ್ನು ಪೂರ್ವ ಮಾಹಿತಿ ಪಡೆದ ಗಣಿ ಮಾಲಿಕರು ತಪ್ಪಿಸಿ ಇಟ್ಟಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ನದಿ ದಡದಲ್ಲಿ ಮರಳು ಕಾರ್ಮಿಕರಿಗೆ ಉಳಿದುಕೊಳ್ಳಲು ಎರಡು ಟರ್ಪಾಲಿನ ಶೆಡ್ ಗಳನ್ನು ನಿರ್ಮಿಸಿದ್ದು ಅದನ್ನು ಗ್ರಾಮಸ್ಥರು ಧ್ವಂಸಮಾಡಿದ್ದಾರೆ.
Kshetra Samachara
24/01/2022 09:31 pm