ವಿಟ್ಲ: ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂ. ಮಾಜಿ ಸದಸ್ಯರೊಬ್ಬರು, ಪೌರ ಕಾರ್ಮಿಕ ರಾಜೇಶ್ ವಿರುದ್ಧ ಲಂಚ ಕೇಳಿದ ಆರೋಪ ಹೊರಿಸಿ ಮೇಲಾಧಿಕಾರಿಗಳಿಗೆ ದೂರು ಕೊಡಿಸಿದ್ದರಿಂದಲೇ ಮನನೊಂದ ಬಡಪಾಯಿ ರಾಜೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಪೌರಕಾರ್ಮಿಕನಿಗೆ ಈ ರೀತಿ ಕಿರುಕುಳ ಕೊಟ್ಟ ಘಟನೆಯನ್ನು ಖಂಡಿಸಿ ವಿಟ್ಲ ಪಟ್ಟಣ ಪಂ. ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ, ಮುಷ್ಕರ ನಡೆಸಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ವಿಟ್ಲ ಮಂಗಳಪದವಿನ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂ. ಮಾಜಿ ಸದಸ್ಯ, ಪೌರಕಾರ್ಮಿಕ ರಾಜೇಶ್ ಮೇಲೆ ಲಂಚ ಕೇಳಿದ ಆರೋಪ ಹೊರಿಸಿ ಮೇಲಾಧಿಕಾರಿಗಳಿಗೆ ದೂರು ಕೊಡಿಸಿದ್ದರೆನ್ನಲಾಗಿದೆ. ಜ.20ರಂದು ಬೆಳಿಗ್ಗೆ ರಾಜೇಶ್ ಕೆಲವರಿಗೆ ವಾಟ್ಸ್ ಆಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು, "ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಇದರಿಂದ ಮಾನಸಿಕವಾಗಿ ನೊಂದಿರುತ್ತೇನೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ" ಎಂದು ಸಂದೇಶ ಕಳುಹಿಸಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರೆನ್ನಲಾಗಿದೆ.
ತಕ್ಷಣ ಸ್ನೇಹಿತರು ರಾಜೇಶ್ ಗಾಗಿ ಹುಡುಕಾಡಿದಾಗ ನೇತ್ರಾವತಿ ಸೇತುವೆ ಸಮೀಪ ರಾಜೇಶ್ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. "ಲಂಚದ ಸುಳ್ಳು ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಮಗೆ ಕೂಡ ಕಿರುಕುಳ ನೀಡುತ್ತಿದ್ದು, ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಿ ಬಳಿಕ ಕೆಲಸ ಆರಂಭಿಸಲಿದ್ದೇವೆ" ಎಂದು ಸಿಬ್ಬಂದಿ ತಿಳಿಸಿದ್ದು, ಅದರಂತೆ ಮನವಿ ಸಲ್ಲಿಸಿದ ಬಳಿಕ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ.
Kshetra Samachara
20/01/2022 08:49 pm