ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಫೋಟೊವನ್ನು ಮುಸ್ಲಿಂ ಯುವಕನ ಫೋಟೊದೊಂದಿಗೆ ಎಡಿಟ್ ಮಾಡಿ ಅವರಿಬ್ಬರಿಗೆ ಸಂಬಂಧವಿದೆಯೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಫೋಟೊವನ್ನು ಆಕೆಯ ಇನ್ ಸ್ಟಾಗ್ರಾಂ ಪೇಜ್ ನಿಂದ ತೆಗೆಯಲಾಗಿತ್ತು. ಬಳಿಕ 'ಮುಲ್ಲಾ ರಹಿಮಾನ್ ಜೊತೆಗೆ ಕುಚಿಕು ಇದೆ' ಎಂದು ಬರೆದು ಮುಸ್ಲಿಂ ಯುವಕನ ಫೋಟೊ ಜೊತೆಗಿಟ್ಟು ಎಡಿಟ್ ಮಾಡಲಾಗಿತ್ತು. ಈ ಫೋಟೊವನ್ನು ಕೆಲವು ಸಾಮಾಜಿಕ ಜಾಲತಾಣದ ಹಲವಾರು ಪೇಜ್ ಗಳಲ್ಲಿ ವೈರಲ್ ಮಾಡಲಾಗಿದೆ.
ಈ ಫೋಟೊ ವಿದ್ಯಾರ್ಥಿನಿಗೂ ಲಭ್ಯವಾಗಿದೆ. ಇದೇ ವೇಳೆ, 'ಮುಸ್ಲಿಂ ಯುವಕನೊಂದಿಗೆ ಹಿಂದೂ ವಿದ್ಯಾರ್ಥಿನಿಯ ಕುಚಿಕು' ಎಂಬ ವಿಚಾರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೂ ಬಂದಿದೆ. ಅ ಬಳಿಕ ಈ ಬಗ್ಗೆ ವಿಚಾರ ನಡೆಸಿದಾಗ, ಫೋಟೊಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಕುಟುಂಬಸ್ಥರಿಗೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಕುಟುಂಬಸ್ಥರು ಘಟನೆ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kshetra Samachara
16/01/2022 10:00 pm