ಮಂಗಳೂರು: ನಗರದ ವಿವಿಧೆಡೆಯ 13 ದೇವಸ್ಥಾನ, ದೈವಸ್ಥಾನ ಹಾಗೂ 3 ಮನೆಗಳಿಗೆ ನುಗ್ಗಿ ದರೋಡೆಗೈದಿರುವ ಕುಖ್ಯಾತ ಕಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬೈರಪುರ, ತರಿಕೆರೆ ನಿವಾಸಿ ನಾಗ ನಾಯ್ಕ (55), ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಮಾರುತಿ ಸಿ.ವಿ.(33) ಕಣದ ಸಾಲು ಬೀದಿ ಬಂಧಿತ ಆರೋಪಿಗಳು.
ನಗರದ ಅಶೋಕ ನಗರದ ನಿವಾಸಿಯೋರ್ವರು ನ.10 ರಂದು ಮನೆಗೆ ಬೀಗ ಹಾಕಿ ತಂಜಾವೂರು ಕಡೆಗೆ ಹೋಗಿದ್ದರು. ನ.12ರಂದು ಬೆಳಗ್ಗೆ 7ಕ್ಕೆ ಅವರು ಮನೆಗೆ ಬಂದ ಸಂದರ್ಭ ಯಾರೋ ಮನೆ ಹಿಂಬದಿಯ ಕಿಟಕಿಯ ಸರಳುಗಳನ್ನು ಬಲತ್ಕಾರವಾಗಿ ಬೆಂಡ್ ಮಾಡಿ ಕಿಟಕಿ ಮೂಲಕ ಒಳ ಪ್ರವೇಶಿಸಿ ಕೋಣೆಯ ಕಪಾಟಿನಲ್ಲಿಟ್ಟಿದ್ದ 6.86 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಕಾರ್ಯಾಚರಣೆ ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ ನಾಯ್ಕ ಹಾಗೂ ಮಾರುತಿ ಸಿ.ವಿ. ಎಂಬವರನ್ನು ಡಿ.3ರಂದು ಬಂಧಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ನಾಗ ನಾಯ್ಕ ಎಂಬಾತನು ಕುಖ್ಯಾತ ಕಳ್ಳನಾಗಿದ್ದು, ಚಿಕ್ಕಮಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದನು. ಅಲ್ಲದೆ ಮಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದೈವಸ್ಥಾನ, ದೇವಸ್ಥಾನ, ಮನೆಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳಿಂದ 406 ಗ್ರಾಂ ತೂಕದ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 16 ಕೆಜಿ ತೂಕದ 10.40 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 28.40 ಲಕ್ಷ ರೂ. ಸೊತ್ತು ವಶಪಡಿಸಿಕೊಳ್ಳಲಾಗಿದೆ.
Kshetra Samachara
09/12/2021 06:55 pm