ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಅನ್ಯ ಕೋಮಿನ ಯುವಕರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಕುಂದಾಪುರ: ಕೋಳಿ ಮಾಂಸ ವ್ಯಾಪಾರ ಮಾಡುತ್ತಿದ್ದ ಯುವಕನಿಗೆ ಕ್ಷುಲ್ಲಕ ಕಾರಣಕ್ಕೆ ಥಳಿಸಿದ ಘಟನೆ ಕುಂದಾಪುರ ಸಮೀಪದ ಮೂಡುಗೋಪಾಡಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಜುನೈದ್ (21) ಹಲ್ಲೆಗೊಳಗಾದ ಯುವಕ.

ಇವರು ಮಧ್ಯಾಹ್ನ 1.30ರ ಸುಮಾರಿಗೆ ವಾಹನದಲ್ಲಿ ಕೋಳಿ ಮಾಂಸ ವಿತರಿಸುತ್ತಾ ಕುಂದಾಪುರ ಚರ್ಚ್ ರೋಡಿನಿಂದ ಕೋಡಿ ಕಡೆ ಹೋಗುತ್ತಿರುವಾಗ ವಾಹನ ಯಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಂತಿದೆ. ಅದೇ ರಸ್ತೆಯ ವಿರುದ್ಧ ದಿಕ್ಕಿನಿಂದ ಬಂದ ವ್ಯಕ್ತಿ, ವಾಹನವನ್ನು ಬದಿಗೆ ನಿಲ್ಲಿಸಲು ಹೇಳಿದ್ದಾನೆ. ಅದಕ್ಕೆ ಡ್ರೈವರ್ ವಾಹನ ಕೆಟ್ಟಿದೆ, ದೂಡಬೇಕು ಎಂದು ಹೇಳಿ, ಸ್ವಲ್ಪ ವಾಹನ ದೂಡಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಈ ಕ್ಷುಲ್ಲಕ ಕಾರಣಕ್ಕೇ ವ್ಯಕ್ತಿ ಕೋಪಗೊಂಡು ನನ್ನನ್ನೇ ವಾಹನ ದೂಡಲು ಹೇಳುತ್ತಿಯಾ ಎಂದು ಕೈ ಯಿಂದ ಹಲ್ಲೆ ಮಾಡಿದ್ದಾನೆ. ಜುನೈದ್ ಪರಿಸ್ಥಿತಿ ವಿವರಿಸಿದರೂ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ, ಬಂದ ವ್ಯಕ್ತಿ ಥಳಿಸಿದ ಎನ್ನಲಾಗಿದೆ. ಇದೇ ವೇಳೆ ಥಳಿಸಿದ ವ್ಯಕ್ತಿಯ ಗೆಳೆಯ ಅಲ್ಲಿಗೆ ಬಂದು ಸೇರಿಕೊಂಡು ಇಬ್ಬರೂ ಡ್ರೈವರ್ ಜುನೈದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಬಾಟ್ಲಿಯಿಂದ ಹಲ್ಲೆ ಮಾಡಿದ್ದಾರೆ.

ಈ ಘಟನೆ ನೋಡಿ ಬಿಡಿಸಲು ಬಂದ ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಬಾತೀಶ್ (18) ಮೇಲೂ ಹಲ್ಲೆಗೈಯಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಜುನೈದ್ ಹಾಗೂ ವಿದ್ಯಾರ್ಥಿ ಮೊಹಮ್ಮದ್ ಬಾತೀಶ್ ರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

08/12/2021 10:30 pm

Cinque Terre

14.39 K

Cinque Terre

1