ಸುಳ್ಯ: ರಸ್ತೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ತಿಂಗಳಿನಿಂದ ಮೂರು ಕುಟುಂಬಗಳ ನಡುವೆ ಇದ್ದ ವಿವಾದವನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಬಗೆಹರಿಸಿದ್ದಾರೆ.
ಸುಳ್ಯ ಪಟ್ಟಣದ ಜಯನಗರ ರಸ್ತೆಗೆ ಸಂಬಂಧಿಸಿದಂತೆ ಈ ವಿವಾದ ಇತ್ತು. ಕಳೆದ ಆರು ತಿಂಗಳ ಹಿಂದೆ ಜಯನಗರ ರುದ್ರಭೂಮಿ ಸಮೀಪ ಸತೀಶ ಪೂಜಾರಿ ಹಾಗೂ ಸ್ಥಳೀಯ ಎರಡು ಮನೆಯವರ ರಸ್ತೆಗೆ ಸಂಬಂಧಿಸಿ ಗಲಾಟೆ ನಡೆಯುತ್ತಲೇ ಇತ್ತು. ನಂತರ ಸುಳ್ಯ ಪೊಲೀಸರ ಮಧ್ಯಪ್ರವೇಶದಿಂದ ಇತ್ಯರ್ಥ ಗೊಂಡಿತ್ತು. ಇದೀಗ ಅದೇ ರಸ್ತೆಗೆ ಸಂಬಂಧಿಸಿ ಇಂದು ಸೋಮವಾರ ಬೆಳಿಗ್ಗಿನಿಂದ ಮತ್ತೆ ಮೂರು ಕುಟುಂಬಸ್ಥರ ನಡುವೆ ಕಲಹ ಉಂಟಾಗಿದ್ದು ಮತ್ತೆ ಪೊಲೀಸರು, ನಗರ ಪಂಚಾಯತ್ ಅಧಿಕಾರಿಗಳು, ತಾಲೂಕು ಆಡಳಿತ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಬಂದು ಹರಸಾಹಸಪಟ್ಟು ಮತ್ತೆ ಕಲಹವನ್ನು ಇತ್ಯರ್ಥಪಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಮೊದಲಿಗೆ ಎರಡು ಮನೆಗಳಿಗೆ ರಸ್ತೆ ಒಂದೇ ದಿಕ್ಕಿನಿಂದ ಇದ್ದವು. ನಂತರ ಎರಡನೆಯ ಮನೆಗೆ ಸಂಪರ್ಕಿಸಲು ರಸ್ತೆಯನ್ನು ಸತೀಶ ಪೂಜಾರಿಯವರ ಮನೆಗೆ ಸಂಪರ್ಕಿಸುವ ರಸ್ತೆಯಿಂದ ತಕ್ಕಮಟ್ಟಿಗೆ ತೆಗೆಯಲಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಈ ಮೂವರಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ನಗರ ಪಂಚಾಯಿತಿ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಆರೋಗ್ಯ ನಿರೀಕ್ಷಕ ಲಿಂಗರಾಜು, ಸುಳ್ಯ ವಿ.ಎ ತಿಪ್ಪೇಶ್, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಿಲಿಟರಿ ಗ್ರೌಂಡ್ ನ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡು ವಿನಾಕಾರಣ ಪರಸ್ಪರ ಗಲಾಟೆ ಮಾಡಿಕೊಂಡು ನೀವು ಇರುವ ಮನೆಯನ್ನು ಕೂಡ ಕಳೆದುಕೊಳ್ಳಬೇಡಿ ಎಂದು ತಿಳಿಹೇಳಿದ್ದಾರೆ.
Kshetra Samachara
06/12/2021 06:57 pm