ಮಂಗಳೂರು: ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಪರವಾನಗಿ ರಹಿತ ಬಂದೂಕು ಹಾಗೂ ಸ್ಫೋಟಕ ಸಾಮಗ್ರಿ ಹೊಂದಿದ್ದ ಯುವಕನೋರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ ಬ್ರಹ್ಮಾವರ ಹಾವಂಜೆಯ ರೋನಿ ಡಿಸೋಜ (32) ಬಂಧಿತ. ಮಂಗಳವಾರ ಸಂಜೆ 5.30ರ ಸುಮಾರಿಗೆ ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿ ಎಂ.ಮೊಹಾಂತೊ ಹಾಗೂ ಟಿ.ಮೋಹರ್ ಎಂಬವರು ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದರು. ಈ ಸಂದರ್ಭ ಏರ್ ಇಂಡಿಯಾ ವಿಮಾನದಲ್ಲಿ ಕುವೈಟ್ ನಿಂದ ಬರುತ್ತಿರುವ ತನ್ನ ಸಂಬಂಧಿಕರೋರ್ವರನ್ನು ಕರೆದುಕೊಂಡು ಬರಲೆಂದು ಆರೋಪಿ ರೋನಿ ಡಿಸೋಜ ಈ ಏರ್ ಪೋರ್ಟ್ ಗೆ ಬಂದಿದ್ದ. ಈತ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಫೋರ್ಡ್ ಫಿಯಾಸ್ಟೊ ಕಾರಿನಲ್ಲಿ ಬಂದೂಕು ಕಂಡು ಬಂದಿದೆ. ಈ ಬಗ್ಗೆ ರೋನಿಯಲ್ಲಿ ವಿಚಾರಿಸಿದಾಗ ಆತ ಸೂಕ್ತ ಉತ್ತರ ನೀಡಿಲ್ಲ. ಬಳಿಕ ಆತ ಶಿಕಾರಿ ಮಾಡುತ್ತಿರುವ ವಿಚಾರದ ಬಗ್ಗೆ ಒಪ್ಪಿದ್ದಾನೆ.
ಬಳಿಕ ಬಜಪೆ ಪೊಲೀಸರು ಆರೋಪಿಯನ್ನು ಬಂಧಿಸಿ ಎರಡು ಬಂದೂಕು, ಸ್ಫೋಟಕ ಸಾಮಗ್ರಿ ಸಹಿತ ಕಾರು, 2 ಲಕ್ಷ ರೂ., ಸೊತ್ತು ವಶಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Kshetra Samachara
04/12/2021 12:58 pm