ಸುರತ್ಕಲ್: ಮಹಿಳೆಗೆ ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ಸುರತ್ಕಲ್ ಟೋಲ್‌ಗೇಟ್ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಯೋಗೀಶ್ ಎಂದು ಗುರುತಿಸಲಾಗಿದೆ.
ಕಳೆದ ನ.27ರಂದು ರಾತ್ರಿ 9 ಗಂಟೆ ಸುಮಾರಿಗೆ ಸೀಮಾ ರಂಜಿತ್ ಶೆಟ್ಟಿ ಎಂಬವರು ತನ್ನ ಪತಿಯ ಜೊತೆ ಕಾರಿನಲ್ಲಿ ಸುರತ್ಕಲ್ ಟೋಲ್‌ಗೇಟ್ ಬಳಿ ತಲುಪಿ, ಎಡಬದಿ ರಸ್ತೆಯಲ್ಲಿ ತೆರಳಲು ಕಾರನ್ನು ಎಡಕ್ಕೆ ತಿರುಗಿಸಿದಾಗ ಟೋಲ್ ಸಿಬ್ಬಂದಿ ಯೋಗೀಶ್ ಕಾರಿಗೆ ಅಡ್ಡ ನಿಂತು ಈ ರಸ್ತೆಯಲ್ಲಿ ಹೋಗಬಾರದು. ಬಲಬದಿಯ ಗೇಟ್‌ಮೂಲಕ ತೆರಳುವಂತೆ ಒತ್ತಾಯಿಸಿದ. ಅಲ್ಲದೆ, ಕಾರಿನ ಮುಂದೆ ಕೋನ್‌ಗಳನ್ನು ಅಡ್ಡವಾಗಿ ನಿಲ್ಲಿಸಿದ.
'ಈ ರೀತಿ ಯಾಕೆ ಮಾಡುತ್ತೀರಿ?' ಎಂದು ಸೀಮಾ ಅವರು ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಹೊಡೆಯುವ ರೀತಿಯಲ್ಲಿ ಬಂದು ಮೈಗೆ ಕೈ ಹಾಕಲು ಯತ್ನಿಸಿದ್ದಾನೆ. ಅಲ್ಲದೆ, ತಡೆಯಲು ಮುಂದಾದ ಸೀಮಾ ಅವರ ಪತಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದರು.
ಕೂಡಲೇ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಸೂಚನೆಯಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಯೋಗೀಶ್‌ನನ್ನು ಬಂಧಿಸಿದ್ದಾರೆ.
ನಾಗರಿಕರ ದೂರಿಗೆ ಕೂಡಲೇ ಸ್ಪಂದಿಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಕಾರ್ಯವೈಖರಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ನಾಗರಿಕರಿಗೆ ಕಿರುಕುಳ ನೀಡುತ್ತಿರುವ ಸುರತ್ಕಲ್ ಟೋಲ್ ಗೇಟ್ ನ್ನು ಕೂಡಲೇ ಮುಚ್ಚಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
30/11/2021 09:35 am