ಮಂಗಳೂರು: ನಗರದ ಹೊರವಲಯದ ಪರಾರಿ ಹೆಂಚಿನ ಫ್ಯಾಕ್ಟರಿಯಲ್ಲಿ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹೊರ ರಾಜ್ಯದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಮೂವರು ಮತ್ತು ಜಾರ್ಖಂಡ್ ಮೂಲದ ಓರ್ವನನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು 21 ವರ್ಷದವರಾಗಿದ್ದು, ಮತ್ತೋರ್ವ 33 ವರ್ಷದವನಾಗಿದ್ದಾನೆ.
ಜಾರ್ಖಂಡ್‌ನ ಸಿಂಡೇಗಾ ಜಿಲ್ಲೆಯ 8ರ ಹರೆಯದ ಬಾಲಕಿ ಮೇಲೆ ನ. 21ರಂದು ಟೈಲ್ಸ್ ಫ್ಯಾಕ್ಟರಿಯಲ್ಲಿ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಬಳಿಕ ಫ್ಯಾಕ್ಟರಿ ಒಳಗಡೆ ಇದ್ದ ಚರಂಡಿಗೆ ದುರುಳರು ಬಾಲಕಿಯ ಮೃತದೇಹವನ್ನು ಎಸೆದಿದ್ದರು. ಮೂವರು ಆರೋಪಿಗಳು ಟೈಲ್ಸ್ ಫ್ಯಾಕ್ಟರಿ ಸಿಬ್ಬಂದಿಯಾಗಿದ್ದು, ಓರ್ವ ಪುತ್ತೂರಿನಲ್ಲಿ ಕೂಲಿ ಕಾರ್ಮಿಕ. ಈ ಕಿರಾತಕರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಮತ್ತು ಐಪಿಸಿ 302 ಅಡಿ ಪ್ರಕರಣ ದಾಖಲಾಗಿದೆ.
ನಾಲ್ವರು ಆರೋಪಿಗಳ ಪೈಕಿ ಮೂವರು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢವಾಗಿದೆ. ಇಬ್ಬರು ಆರೋಪಿಗಳು ಈ ಹಿಂದೆಯೂ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ತಂದೆ-ತಾಯಿ ಕುಡಿತದ ಚಟಕ್ಕೆ ಬಿದ್ದಿದ್ದು, ಇದನ್ನೇ ಬಳಸಿ ದೌರ್ಜನ್ಯ ಎಸಗಿದ್ದಾರೆ.
1960ನೇ ಇಸವಿಯಲ್ಲಿ ಮಂಗಳೂರು ಹೊರವಲಯದ ಪರಾರಿ ಬಳಿ ಆರಂಭವಾಗಿದ್ದ ರಾಜ್ ಟೈಲ್ಸ್ ಫ್ಯಾಕ್ಟರಿಯನ್ನು ಸದ್ಯ ಕೇರಳ ಮತ್ತು ಮಂಗಳೂರು ಮೂಲದವರಿಂದ ಲೀಸ್ ಪಡೆದು ಫ್ಯಾಕ್ಟರಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.ಈ ಫ್ಯಾಕ್ಟರಿಯಲ್ಲಿ ಒಟ್ಟು 35 ಕಾರ್ಮಿಕರಿದ್ದು, ಆರು ಮಕ್ಕಳಿದ್ದಾರೆ. ಮಧ್ಯಪ್ರದೇಶ, ಬಿಹಾರ್, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದ ಕಾರ್ಮಿಕರು ಇಲ್ಲಿದ್ದಾರೆ.
Kshetra Samachara
24/11/2021 02:34 pm