ಮಂಗಳೂರು: ನಗರದ ಸ್ಮಾರ್ಟ್ ಸಿಟಿ ಅಧಿಕಾರಿಯೋರ್ವರ ಮನೆ, ಕಚೇರಿ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದೆ.
ರಾಜ್ಯಾದ್ಯಂತ 60 ವಿವಿಧ ಕಡೆಗಳಲ್ಲಿ 15 ರಾಜ್ಯ ಸರಕಾರದ ಅಧಿಕಾರಿಗಳ ಮನೆ, ಕಚೇರಿಗೆ ನಡೆದ ದಾಳಿಯಲ್ಲಿ ಮಂಗಳೂರಿನ ಸ್ಮಾರ್ಟ್ ಸಿಟಿ ಇಂಜಿನಿಯರ್ ಲಿಂಗೇಗೌಡ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಚಾಮರಾಜನಗರ, ಹಾಸನ, ಮೈಸೂರು ಎಸಿಬಿ ಅಧಿಕಾರಿಗಳ ತಂಡದಿಂದ ಈ ದಾಳಿ ನಡೆದಿದೆ. ಇಬ್ಬರು ಡಿವೈಎಸ್ಪಿ ಅಧಿಕಾರಿಗಳ ನೇತೃತ್ವದಲ್ಲಿ 25ಕ್ಕೂ ಅಧಿಕ ಅಧಿಕಾರಿಗಳಿಂದ ದಾಳಿ ನಡೆದಿದೆ.
ಮಹಾನಗರ ಪಾಲಿಕೆಯಲ್ಲಿನ ಕಚೇರಿ, ಉರ್ವದಲ್ಲಿರುವ ಲಿಂಗೇಗೌಡರ ಮನೆಯ ಮೇಲೆ ದಾಳಿ ನಡೆದಿದೆ. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಮಂಗಳೂರಿನಲ್ಲಿ ಲಿಂಗೇಗೌಡ ಕಾರ್ಯನಿರ್ವಹಿಸುತ್ತಿದ್ದರು. ಪಾಲಿಕೆಯ ಜೂನಿಯರ್ ಇಂಜಿನಿಯರ್ ಆಗಿ ಬಂದಿದ್ದ ಲಿಂಗೇಗೌಡರ ಮೇಲೆ ಸದ್ಯ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 15ವರ್ಷಗಳ ಹಿಂದೆಯೂ ಒಂದು ಬಾರಿ ಲಿಂಗೇಗೌಡರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು.
Kshetra Samachara
24/11/2021 10:51 am