ಮೂಡುಬಿದಿರೆ: ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ತಂದ್ರಕೆರೆ ಗಂಪದದ್ದ ಎಂಬಲ್ಲಿ ಹಲವು ಸಮಯಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಗ್ರಾನೈಟ್ ಕಲ್ಲಿನ ಕ್ವಾರಿಗೆ ಕೊನೆಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಾಸನ ಮೂಲದ ಸುದರ್ಶನ್ ಎಂಬಾತ ನಡೆಸುತ್ತಿರುವ ಈ ಕ್ವಾರಿಗೆ ಭಾನುವಾರ ರಾತ್ರಿ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಗ್ರಾನೈಟ್ ಲೋಡ್ ಇದ್ದ ಒಂದು ಲಾರಿ, ಒಂದು ಹಿಟಾಚಿ ಮತ್ತು ಗ್ರಾನೈಟ್ ಕಟ್ಟಿಂಗ್ ಬ್ಲಾಸ್ಟಿಂಗ್ ಯಂತ್ರ ವಶಪಡಿಸಲಾಗಿದೆ.
ಸರಕಾರಿ ಜಾಗದಲ್ಲಿ ಹಲವು ದಿನಗಳಿಂದ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ರಾತ್ರಿ- ಹಗಲೆನ್ನದೆ ಭಾರಿ ಪ್ರಮಾಣದ ಸ್ಫೋಟಕ ಬಳಸಿ ಕಲ್ಲು ತೆಗೆಯಲಾಗುತ್ತಿತ್ತು. ಇದರಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗಿತ್ತು.
ಸಾರ್ವಜನಿಕರ ದೂರಿನ ಆಧಾರದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು, ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಮುಗೇರಕ್ಲ ರಸ್ತೆಯಲ್ಲಿ ಎರಡು ಬೃಹತ್ ಗ್ರಾನೈಟ್ ಕಲ್ಲುಗಳನ್ನು ಹೇರಿದ್ದ ಲಾರಿಗಳು ಪತ್ತೆಯಾಗಿದ್ದು, ಅವುಗಳನ್ನು ತಹಶೀಲ್ದಾರ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಾರ್ನಾಡ್ ನಿಂದ ಹಾಸನ- ಬೆಂಗಳೂರು ಮಾರ್ಗವಾಗಿ ಚೆನ್ನೈ ಗೆ ಅಕ್ರಮವಾಗಿ ಗ್ರಾನೈಟ್ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಸುದರ್ಶನ್ ಈ ಹಿಂದೆಯೂ ಬೇರೆಯವರ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಆರೋಪ ಎದುರಿಸುತ್ತಿದ್ದು, ಐಶಾರಾಮಿ ಜೀವನ ಸಾಗಿಸುತ್ತಿದ್ದ. ಸ್ಥಳೀಯರಿಗೆ ಬೆದರಿಕೆಯನ್ನೂ ಹಾಕುತ್ತಿದ್ದ ಎನ್ನಲಾಗಿದ್ದು, ಈತ ನಾನಾ ಇಲಾಖೆಗಳ ಅಧಿಕಾರಿಗಳ ಜೊತೆ ನಂಟು ಹೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದೆ.
Kshetra Samachara
22/11/2021 07:45 pm